

ನವದೆಹಲಿ: 'ಮೆಟ್ರೊ ಮ್ಯಾನ್' ಎಂದು ಖ್ಯಾತಿಯಾಗಿರುವ ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಅಣಿಯಾಗಿದ್ದಾರೆ.
ಅವರು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಮುಂಬರುವ ತಿಂಗಳುಗಳಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಶ್ರೀಧರನ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕೇರಳ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂಬ ತಯಾರಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಬಿಜೆಪಿ ಹಲವರಿಗೆ ಗಾಳ ಹಾಕಿದೆ. ಮುಂದಿನ ವಾರ ಕೇರಳದಲ್ಲಿ ಬಿಜೆಪಿ ಆಯೋಜಿಸಿರುವ ವಿಜಯ ಯಾತ್ರೆಯಲ್ಲಿ ಶ್ರೀಧರನ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
88ರ ವಯೋಮಾನದ ಶ್ರೀಧರನ್ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಭಾರತದ ದೆಹಲಿ ಮೆಟ್ರೋ ಸೇರಿದಂತೆ ಇತರ ನಗರಗಳ ಮೆಟ್ರೋ ಯೋಜನೆ ಹಾಗೂ ಮಹತ್ವದ ರೈಲು ಯೋಜನೆಗಳಲ್ಲಿ ಶ್ರೀಧರನ್ ಪಾತ್ರ ತುಂಬಾ ದೊಡ್ಡದಿದೆ. ಅದ್ಭುತ ಎಂಜಿನಿಯರ್ ಆಗಿರುವ ಅವರನ್ನು ಮೆಟ್ರೊ ಮ್ಯಾನ್ ಎಂದೇ ಕರೆಯಲಾಗುತ್ತಿದೆ.