

ಶಿವಮೊಗ್ಗ: ವಿದ್ಯುತ್ ದರ ಏರಿಕೆ ವಿರೋಧಿಸಿ ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಘಟಕದಿಂದ ಗುರುವಾರ ಕೆಇಬಿ ವೃತ್ತದ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಅಶೋಕ್ ನಾಯ್ಕ ಸೇರಿ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಬೇಡಿಕೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಕಚೇರಿ ಒಳಗೆ ಹೋಗಲು ಅವಕಾಶ ನೀಡಿ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ ಪಟ್ಟು ಹಿಡಿದರು. ಆಗ ಪೊಲೀಸರು ಕೇವಲ ನಾಯಕರಿಗೆ ಮಾತ್ರ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಪ್ರತಿಭಟನಕಾರರು ಒಪ್ಪದಿದ್ದಾಗ ಪೊಲೀಸರು ಬಿ.ವೈ.ರಾಘವೇಂದ್ರ, ಅಶೋಕ್ ನಾಯ್ಕ, ಪ್ರಮುಖರಾದ ರತ್ನಾಕರ್ ಶೆಣೈ, ಟಿ.ಬಿ.ಜಗದೀಶ್, ಪದ್ಮಿನಿ ಸೇರಿ 50ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದರು.
ಉಚಿತ ಭಾಗ್ಯಗಳ ಹೆಸರಿನಲ್ಲಿ ವಿದ್ಯುತ್ ದರ ಏರಿಸಿ ಜನಸಾಮಾನ್ಯರ ಮೇಲೆ ಬರೆ ಹಾಕಲಾಗುತ್ತಿದೆ. ಕಳೆದೆರಡು ತಿಂಗಳಿನಿಂದ ಸೇರಿಸಿ ದರ ಏರಿಕೆ ಮಾಡಿ ಗ್ರಾಹಕರಿಗೆ ಹೊರೆಯನ್ನುಂಟು ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ನೀತಿಯಾಗಿದೆ. ಉಚಿತ ಎಂದು ಹೇಳಿ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಾರೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.