

ಎಲ್ಲ ಸಿದ್ಧತೆಗಳು ಪೂರ್ಣ | ಶೀಘ್ರ ಪ್ರಕ್ರಿಯೆ ಆರಂಭಿಸಲಿದೆ ಕೇಂದ್ರ ಸರ್ಕಾರ
ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಶೀಘ್ರದಲ್ಲೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್ಆರ್ಬಿ) ವಿಲೀನ ಪ್ರಕ್ರಿಯೆ ಆರಂಭಿಸಲಿದೆ. ಇದರಿಂದ ದೇಶದಲ್ಲಿ ಹಾಲಿ ಇರುವ 43 ಆರ್ಆರ್ಬಿಗಳ ಸಂಖ್ಯೆಯು 28ಕ್ಕೆ ಇಳಿಯಲಿದೆ. ‘ಒಂದು ರಾಜ್ಯ-ಒಂದು ಆರ್ಆರ್ಬಿ’ ತತ್ವಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿಲೀನಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ 15 ಬ್ಯಾಂಕುಗಳು ವಿಲೀನಗೊಳ್ಳಲಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಆಂಧ್ರಪ್ರದೇಶದಲ್ಲಿ ನಾಲ್ಕು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಮೂರು, ಕರ್ನಾಟಕ, ಗುಜರಾತ್, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಆರ್ಆರ್ಬಿಗಳಿವೆ. ಈ ಬ್ಯಾಂಕ್ಗಳ ಕಾರ್ಯಾಚರಣೆ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸರ್ಕಾರ ವಿಲೀನಕ್ಕೆ ಮುಂದಾಗಿದೆ. 2021-22ರಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಬಲವರ್ಧನೆಗೆ ಕ್ರಮ ಕೈಗೊಂಡಿತು. ಇದಕ್ಕೆ ಪೂರಕವಾಗಿ ಎರಡು ವರ್ಷಗಳವರೆಗೆ ಅವುಗಳ ಬಂಡವಾಳ ವೃದ್ಧಿಗೆ 5,445 ಕೋಟಿ ರೂ. ನೆರವು ಕಲ್ಪಿಸಿತು. ಪರಿಣಾಮ, 2023-24ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಬಂಡವಾಳ ವೆಚ್ಚ ಏರಿಕೆ ಕಂಡಿತು. ಈ ಅವಧಿಯಲ್ಲಿ ಬ್ಯಾಂಕುಗಳು 7,571 ಕೋಟಿ ರೂ. ನಿವ್ವಳ ಲಾಭ ಗಳಿಸಿದವು. 2004-05ರಲ್ಲಿ ಕೇಂದ್ರ ಸರ್ಕಾರ ಆರ್ಆರ್ಬಿಗಳ ವಿಲೀನಕ್ಕೆ ಚಾಲನೆ ನೀಡಿತ್ತು. 196 ಬ್ಯಾಂಕುಗಳನ್ನು 2020-21ರಲ್ಲಿ 43ಕ್ಕೆ ಇಳಿಸಲಾಯಿತು.