

ನವದೆಹಲಿ: ತಮ್ಮ ನೆಚ್ಚಿನ ಆಟಗಾರ, ನಟ, ನಟಿಯರನ್ನು ಸದಾ ಸ್ಮರಿಸಬೇಕು ಎಂಬ ಉದ್ದೇಶದಿಂದ ಜನರು ತಮ್ಮ ಮಕ್ಕಳಿಗೆ ಅವರ ಹೆಸರನ್ನು ಇಡುತ್ತಾರೆ. ಭಾರತದಲ್ಲಿ ಮನೆದೇವರು, ಕುಟುಂಬದ ಹಿರಿಯರ ಸ್ಮರಣೆಗಾಗಿ ಅವರ ಹೆಸರನ್ನು ಮಕ್ಕಳಿಗೆ ಇಡುವ ಸಂಪ್ರದಾಯವಿದೆ.
ಇದೇ ರೀತಿ ಅಮೆರಿಕದ ವ್ಯಕ್ತಿಯೊಬ್ಬ ತನ್ನ ಸಾಕು ಬೆಕ್ಕಿಗೆ ತಮ್ಮ ನೆಚ್ಚಿನ ಫುಟ್ಬಾಲ್ ತಂಡದ ಗೋಲ್ಕೀಪರ್ ಒಬ್ಬರ ಹೆಸರನ್ನು ಇಟ್ಟಿದ್ದಾರೆ. ಈ ಹೆಸರಿನಿಂದ ಪ್ರೇರಣೆ ಪಡೆದುಕೊಂಡಂತೆ ಆ ಬೆಕ್ಕು ಅದ್ಭುತವಾಗಿ ಗೋಲ್ಕೀಪಿಂಗ್ ಮಾಡುತ್ತಿದೆ! ಅದನ್ನು ನೀವು ನೋಡಿಯೇ ಆಸ್ವಾದಿಸಬೇಕು...!
ಅಮೆರಿಕದ ಹೂಡಿಕೆ ಸಲಹೆಗಾರ ಕ್ರಿಸ್ ಡಿಕ್ಸನ್ ಬೆಕ್ಕೊಂದನ್ನು ಸಾಕಿದ್ದಾರೆ. ಇವರಿಗೆ ಬುಂಡೆಸ್ಲಿಗಾದ ಕ್ಲಬ್ ಬೇರೇನ್ ಮ್ಯುನಿಚ್ ಮತ್ತು ಜರ್ಮನಿಯ ರಾಷ್ಟ್ರೀಯ ಫುಟ್ಬಾಲ್ ತಂಡದ ಗೋಲ್ಕೀಪರ್ ಮ್ಯಾನ್ಯುಯೆಲ್ ನ್ಯೂಯರ್ ಎಂದರೆ ತುಂಬಾ ಇಷ್ಟ. ಅದಕ್ಕೆಂದೇ ಅವರು ತಮ್ಮ ಸಾಕು ಬೆಕ್ಕಿಗೆ ಮಿಯಾವ್ನ್ಯುಯೆಲ್ ನ್ಯೂಯರ್ ಎಂದು ನಾಮಕರಣ ಮಾಡಿದ್ದಾರೆ.
ಈ ಬೆಕ್ಕು ಈಗ ತನ್ನ ಅದ್ಭುತ ಗೋಲ್ಕೀಪಿಂಗ್ ಕೌಶಲದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯವಾಗಿದೆ. ಬಹುಶಃ ತನಗೆ ಗೋಲ್ಕೀಪರ್ ಒಬ್ಬರ ಹೆಸರು ಇಟ್ಟಿರುವುದರಿಂದ ಪ್ರೇರಣೆಗೊಂಡು, ಅವರನ್ನೇ ತನ್ನ ಮೇಲೆ ಆವಾನಿಸಿಕೊಂಡು ಬೆಕ್ಕು ಗೋಲ್ಕೀಪಿಂಗ್ ಮಾಡುತ್ತಿರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮಿಯಾವ್ ನ್ಯುಯೆಲ್ ನ್ಯೂಯರ್ನ ಗೋಲ್ಕೀಪಿಂಗ್ ಕೌಶಲ ಎಷ್ಟರಮಟ್ಟಿಗೆ ಸೊಗಸಾಗಿದೆ ಎಂದರೆ, ಕ್ರಿಸ್ ಡಿಕ್ಸನ್ ಎರಡು ಚೆಂಡು ಹಿಡಿದು, ಒಂದನ್ನು ಒದ್ದ ರೀತಿಯಲ್ಲಿ ಮಾಡಿ, ಇನ್ನೊಂದು ಚೆಂಡನ್ನು ಒದ್ದರೆ ಆ ಚೆಂಡನ್ನು ನಿಖರವಾಗಿ ಗುರುತಿಸುವ ಬೆಕ್ಕು ಗೋಲ್ ಆಗದಂತೆ ತಡೆಯುತ್ತದೆ.
ಕ್ರಿಸ್ ಡಿಕ್ಷನ್ ಈ ವಿಡಿಯೋ ತುಣಕನ್ನು ಟ್ವಿಟರ್ನಲ್ಲಿ ಹರಿಬಿಟ್ಟಿದ್ದು, ಇದುವರೆಗೂ 4 ದಶಲಕ್ಷಕ್ಕೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ. ಸಹಸ್ರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇಷ್ಟೆಲ್ಲ ಕತೆ ಓದಿದ ಮೇಲೆ ನಿಮಗೂ ಅದನ್ನು ನೋಡಬೇಕು ಎನಿಸಿದರೆ, ಆ ಟ್ವಿಟರ್ ಲಿಂಕ್ ಇಲ್ಲಿದೆ ನೋಡಿ.