

ಬೆಂಗಳೂರು: ಮುಡಾ ನಿವೇಶನ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ರಾಜಕೀಯ ಮಾಡುತ್ತಿವೆ. ತನಿಖಾ ಸಂಸ್ಥೆ ಛೂ ಬಿಟ್ಟು ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ತೊಂದರೆ ಕೊಡುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಭಾಷಣದಲ್ಲಿ ಮುಡಾ ಪ್ರಸ್ತಾಪ ಮಾಡಿದ್ದು ರಾಜಕೀಯವಲ್ಲದೆ ಮತ್ತೇನು? ಮೊಸರಲ್ಲಿ ಕಲ್ಲು ಹುಡುಕೋ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ದುರುದ್ದೇಶಪೂರಕವಾಗಿ ರಾಜಕೀಯ ಮಾಡುತ್ತಿವೆ. ಏನೇ ಮಾಡಿದರೂ ಟೀಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಮತ್ತೊಂದೆಡೆ ಹರಿಯಾಣ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಧಾನಿ ಮುಡಾ ಪ್ರಕರಣ ಪ್ರಸ್ತಾಪಿಸುವ ಮೂಲಕ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ ಪಕ್ಷಗಳು ಜೊತೆಯಾಗಿ ಸೇರಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿವೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪಡೆದಿದ್ದ 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಅದಕ್ಕೂ ಬಿಜೆಪಿಯವರು ನಾನಾ ರೀತಿಯ ಟೀಕೆಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಮಾಡಬೇಕು, ಅಪಪ್ರಚಾರ ನಡೆಸಬೇಕು ಎಂದು ನಿರ್ಧರಿಸಿಕೊಂಡವರಿಗೆ ಯಾರು, ಏನೇ ಮಾಡಿದರೂ ತಪ್ಪಾಗಿ ಕಾಣುತ್ತದೆ ಎಂದು ಹೇಳಿದರು.
ನಿವೇಶನ ವಾಪಸ್ ನೀಡಿದ ಬಳಿಕ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ನಾವು ಕಾದುನೋಡುತ್ತಿದ್ದೇವೆ. ತನಿಖೆಗೆ ಯಾವುದೇ ವಿರೋಧ ಇಲ್ಲ ಎಂದು ಸಿದ್ದರಾಮಯ್ಯನವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಿರೋಧಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ದೂರಿದರು.
ಮುಡಾ ಪ್ರಕರಣದಲ್ಲಿ ಆರೋಪಗಳೇ ಸುಳ್ಳಾಗಿವೆ. ಹೀಗಾಗಿ ಇಲ್ಲಿ ನೈತಿಕತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಆರೋಪದಲ್ಲಿ ಸತ್ಯ ಇದ್ದಾಗ ನೈತಿಕತೆಯ ಪ್ರಶ್ನೆ ಬರುತ್ತದೆ. ಪಾರ್ವತಿಯವರು ಪತಿ ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ನಿವೇಶನವನ್ನು ವಾಪಸ್ ನೀಡಿದ್ದಾರೆ. ಇದರಲ್ಲಿ ತಪ್ಪು ಒಪ್ಪಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಡಾ.ಪರಮೇಶ್ವರ ಹೇಳಿದರು.