

ಶಿವಮೊಗ್ಗ: ಇಂದಿನ ಮಾನಸಿಕ ಸಮಸ್ಯೆಗಳು ವ್ಯಕ್ತಿಗತವಲ್ಲ. ಅವು ಸಮಾಜದಲ್ಲೇ ಇವೆ. ಆಧುನಿಕ ಸಮಾಜದ ಆಗುಹೋಗುಗಳು, ತಲ್ಲಣಗಳು ವ್ಯಕ್ತಿಯ ಭಾವನಾತ್ಮಕ ಸೂಕ್ಷ್ಮತೆ ಕ್ಷೀಣಿಸುವಂತೆ ಮಾಡಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಕಳವಳ ವ್ಯಕ್ತಪಡಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮನೋವಿಜ್ಞಾನ ವಿಕಾಸದ ಹಲವು ಮಜಲುಗಳನ್ನು, ಅದರ ಆಯಾಮಗಳನ್ನು ವಿವರಿಸಿದರು. ವಿವಿಧ ಸಿದ್ಧಾಂತಗಳು, ಜ್ಞಾನಿಗಳು ವಿಜ್ಞಾನದ ಬೆಳವಣಿಗೆಗೆ ನೀಡಿದ ತಾತ್ವಿಕ ಅಂಶಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರು.
ಆಧುನಿಕ ಯುಗದಲ್ಲಿ ಮನೋವಿಜ್ಞಾನ ಹಾಗೂ ತತ್ವಶಾಸ್ತ್ರಗಳ ಪರಸ್ಪರ ಪೂರಕವಾದ ಅಧ್ಯಯನದ ಅಗತ್ಯವಿದೆ. ಮನೋವಿಜ್ಞಾನದ ವಿದ್ಯಾರ್ಥಿಗಳು ಸಂಕೀರ್ಣ ಮನಸ್ಸಿನ ವಿಚಾರಗಳನ್ನು ಶ್ರದ್ಧೆಯಿಂದ ಅರಿತು ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕಿ ಡಾ.ಪ್ರೀತಿ ವಿ.ಶಾನುಭಾಗ್ ಮಾತನಾಡಿ, 2017ರಲ್ಲಿ ಕಾಲೇಜನ್ನು ಆರಂಭಿಸುವ ಮೂಲಕ ಸಂಕೀರ್ಣವಾದ ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಜ್ಞಾನಗಳ ಕುರಿತು ಅಧ್ಯಯನಗಳನ್ನು ನಡೆಸಲಾಗಿದೆ. ಪಠ್ಯ ಮಾತ್ರವಲ್ಲದೆ ಹಲವಾರು ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳು, ತರಬೇತಿಗಳು, ಸಂಶೋಧನೆಗಳು ಕಾಲೇಜಿನಲ್ಲಿ ನಡೆಯುತ್ತಿವೆ ಎಂದರು.
ಮಾನಸ ಟ್ರಸ್ಟ್‌ನ ನಿರ್ದೇಶಕಿ ಡಾ.ರಜನಿ ಎ.ಪೈ, ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ, ಪ್ರಮುಖರಾದ ಡಾ.ರಾಜೇಂದ್ರ ಚೆನ್ನಿ, ಸಿಸ್ಟರ್ ಮಾರಿ ಇವ್ಲಿನ್, ಡಾ.ಅರ್ಚನಾ ಭಟ್, ಮಂಜುನಾಥ ಸ್ವಾಮಿ ಮುಂತಾದವರಿದ್ದರು.