ವಿದ್ಯಾರ್ಥಿನಿಯರಿಗೆ ‘ನನ್ನ ಮೈತ್ರಿ’ ಮುಟ್ಟಿನ ಕಪ್; ‘ಶುಚಿ’ಗೆ ಹೊಸತನದ ಸ್ಪರ್ಶ !

Nanna Mythri
Published on

ಬೆಂಗಳೂರು: ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಬದಲು ಪರಿಸರ ಸ್ನೇಹಿ, ಅನೇಕ ವರ್ಷಗಳ ಕಾಲ ಮರು ಬಳಕೆ ಸಾಧ್ಯವಿರುವ ಮುಟ್ಟಿನ ಕಪ್ (ಮೆನ್‌ಸ್ಟ್ರುಯಲ್ ಕಪ್) ಉಚಿತವಾಗಿ ವಿತರಿಸುವ ‘ನನ್ನ ಮೈತ್ರಿ’ ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಸೋಮವಾರ ಜಾರಿಯಾಗಲಿದೆ.

ಶಾಲೆ-ಕಾಲೇಜು ತರುಣಿಯರಿಗೆ ಉಚಿತ ನ್ಯಾಪಕಿನ್ ವಿತರಿಸುವ ‘ಶುಚಿ’ ಯೋಜನೆ ಪುನರಾರಂಭಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ೋಷಿಸಿದ್ದು, ಈ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪರ್ಶ ನೀಡಿದ್ದಾರೆ.

ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನಿರ್ವಹಣೆಗೆ ಸೂಕ್ತ ಸಾಧನ ಮೆನ್‌ಸ್ಟ್ರುಯಲ್ ಕಪ್. ಮರು ಬಳಕೆಗೆ ಅನುಕೂಲ, ಪರಿಸರ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ಈ ಕಪ್ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ.

ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಿಗೆ ವಿಸ್ತರಿಸುವ ಮುನ್ನ ಮೊದಲ ಹಂತದಲ್ಲಿ ಚಾಮರಾಜನಗರ ಜಿಲ್ಲೆಯ 300 ತರುಣಿಯರಿಗೆ ವಿತರಿಸಿ ಅಧ್ಯಯನ ಮಾಡಲಾಗಿದೆ. ಈ ಪೈಕಿ 272 ಹೆಣ್ಣುಮಕ್ಕಳು ಕಪ್‌ಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಬಳಕೆ ಮಾಡುತ್ತಿದ್ದಾರೆ.

ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಪರ್ಯಾಯವಾಗಿ ಮುಟ್ಟಿನ ಕಪ್ ಬಳಕೆಗೆ ಉತ್ತಮ ಸ್ಪಂದನೆ ಲಭಿಸಿದ ಕಾರಣ ಎರಡು ಜಿಲ್ಲೆಗಳ ಹಂತಕ್ಕೆ ಪ್ರಯೋಗಿಸಲಾಗುತ್ತಿದೆ. ದಿನಕ್ಕೆ ಎಂಟು ತಾಸು ಈ ಕಪ್ ಬಳಕೆ ಮಾಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆಗೆ ದಿನೇಶ್ ಗುಂಡೂರಾವ್ ಚಿಂತನೆ ನಡೆಸಿದ್ದಾರೆ.

ಸರ್ಕಾರಿ, ಅನುದಾನಿತ ಶಾಲೆ ಪದವಿಪೂರ್ವ ಕಾಲೇಜು, ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮವಹಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಶುಚಿ ಯೋಜನೆಗೆ ಕಾದಿಟ್ಟ ಅನುದಾನದಲ್ಲಿ ಐದು ಕೋಟಿ ರೂ.ಗಳನ್ನು ಮುಟ್ಟಿನಕಪ್‌ಗೆ ಬಳಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಅನುದಾನ ನಿಗದಿ

ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಪ್ಯಾಡ್ ಉಚಿತ ವಿತರಿಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ 19 ಲಕ್ಷ ಹೆಣ್ಣು ಮಕ್ಕಳಿಗೆ ತಲುಪಲಿವೆ.

‘ಶುಚಿ’ ಯೋಜನೆಗೆ ಒಟ್ಟು 45 ಕೋಟಿ ರೂ. ಅನುದಾನ ಕಾದಿರಿಸಲಾಗಿದೆ. ಈ ಪೈಕಿ ಮುಟ್ಟಿನಕಪ್‌ಗೆ ಬಳಸಲಿರುವ ಅನುದಾನ ಹೊರತುಪಡಿಸಿ 40.50 ಕೋಟಿ ರೂ. ಲಭ್ಯತೆಯಿದೆ. 40:50 ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಇಲಾಖೆ ತಿಳಿಸಿದೆ.

ನಾಳೆ ಚಾಲನೆ

ಮಂಗಳೂರಿನ ನೆಹರು ಮೈದಾನದಲ್ಲಿ ಸೋಮವಾರ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ‘ನನ್ನ ಮೈತ್ರಿ’ ಯೋಜನೆಗೆ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ.

ಹತ್ತಾರು ವರ್ಷ ಬಾಳಿಕೆ ಬರುವ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ‘ನನ್ನ ಮೈತ್ರಿ’ ಹೆಸರಿನಡಿ ದಕ್ಷಿಣಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳ 15 ಸಾವಿರ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ಯೋಜಿಸಲಾಗಿದೆ.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಚಿತ್ರನಟಿ ಸಪ್ತಮಿ ಗೌಡ ಹಾಜರಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net