VIDEO: ಡೆಡ್ಲಿ ಹಾವಿನ ಜತೆ ಚೆಲ್ಲಾಟ...ಭಯಂಕರ ಅನಾಕೊಂಡದ ಬಾಲ ಹಿಡಿದು ಆಟ..!

Anakonda
Published on

ಅನಾಕೊಂಡ ಹಾವು ಅತ್ಯಂತ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಮನುಷ್ಯನನ್ನು ಸಲೀಸಾಗಿ ತೆಕ್ಕೆಗೆ ಎಳೆದುಕೊಂಡು, ನುಂಗಿಬಿಡಬಲ್ಲ ಹಾವು ಇದು.

ಆದರೆ ಇಂಥ ಅಪಾಯಕಾರಿ ಹಾವಿನ ಜತೆ ಮೂವರು ಚೆಲ್ಲಾಟ ಆಡುತ್ತಿರುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಅದು ಆರು ವರ್ಷಗಳ ಹಳೆಯ ಘಟನೆ. ಆದರೆ ಮತ್ತೆ ಟ್ವಿಟರ್​ನಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ ಇದು ಬ್ರೆಜಿಲ್​ನ ಸಾಂತಾ ಮರಿಯಾ ನದಿಯಲ್ಲಿ 2014ರ ಸೆಪ್ಟೆಂಬರ್​ನಲ್ಲಿ ನಡೆದಿದ್ದು. ಬೋಟಿಂಗ್​ ಹೋಗಿದ್ದ ಮೂವರು ಆ ನೀರಿನಲ್ಲಿ ಕಂಡ ಅನಾಕೊಂಡ ಹಾವಿನ ಬಾಲವನ್ನು ಜಗ್ಗಿ ಹಿಡಿದು, ಎಳೆದಿದ್ದಾರೆ. ಎರಡು ಮೂರು ನಿಮಿಷ ಅದರ ಬಾಲವನ್ನು ಹಾಗೇ ಹಿಡಿದುಕೊಂಡು ಆಟವಾಡಿಸಿದ್ದಾರೆ. ಹಾವಿನ ಮುಖ ನೀರಿನಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದು ಮುಂದೆ ಹೋಗಲು ಪ್ರಯತ್ನಿಸಿದರೂ, ಇವರು ಬಾಲ ಹಿಡಿದಿದ್ದರಿಂದ ಸಾಧ್ಯವಾಗುತ್ತಿರಲಿಲ್ಲ. ಸ್ವಲ್ಪ ಹೊತ್ತು ಹಾವನ್ನೇ ಆಟ ಆಡಿಸಿದ ಮೂವರು ನಂತರ ಅದನ್ನು ಬಿಟ್ಟಿದ್ದಾರೆ. ಹಾವಿನ ಉದ್ದ ಸುಮಾರು 17 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ.

ಸಿರ್ಲೈ ಒಲಿವೈರಾ, ಇವರ ಪತಿ ಬೆಟಿನ್ಹೋ ಬೋರ್ಗಸ್​ ಮತ್ತು ಸ್ನೇಹಿತ ರೋಡ್ರಿಗೋ ಸಾಂತೋಸ್​ ಅವರು ನದಿಯಲ್ಲಿ ಬೋಟಿಂಗ್​ ಹೋಗಿದ್ದರು. ಈ ವೇಳೆ ಬೋರ್ಗಸ್​ ಹಾವಿನ ಬಾಲ ಹಿಡಿದಿದ್ದರು. ಅದನ್ನು ನೋಡಿದ ಸಿರ್ಲೈ ಕೂಗುವುದೂ ವಿಡಿಯೋದಲ್ಲಿ ಕೇಳುತ್ತದೆ. ಅಯ್ಯೋ, ದೇವರೆ..ಅದನ್ನು ಬಿಡಿ ಎಂದು ಅರಚುತ್ತಲೇ ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಮೂರು ದಿನಗಳಾಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net