ರಾಜ್ಯದೆಲ್ಲೆಡೆ ಶೀಘ್ರ ಮೆಮು ರೈಲು ಓಡಾಟ:10 ವರ್ಷಗಳಲ್ಲಿ 536 ಬೋಗಿ, ನೈಋತ್ಯ ರೈಲ್ವೆ ವಲಯದಿಂದ ಪ್ರಸ್ತಾವನೆ

Memu
Published on

| ಆನಂದ ಅಂಗಡಿ ಹುಬ್ಬಳ್ಳಿ

ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣ ಗೊಳ್ಳುತ್ತಿದ್ದಂತೆಯೇ ಮೆಮು ಬೋಗಿಗಳಿರುವ ರೈಲುಗಳ ಸಂಚಾರ ಪ್ರಾರಂಭಿಸಲು ಚಿಂತನೆ ನಡೆದಿದೆ. ವಿದ್ಯುದ್ದೀಕರಣ ಕಾಮಗಾರಿ 2023ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಮಾರ್ಗಗಳಲ್ಲಿ ಮೆಮು ಬೋಗಿಗಳು ಇರುವ ರೈಲು ಹಂತ ಹಂತವಾಗಿ ಸಂಚಾರ ಪ್ರಾರಂಭಿಸಲಿವೆ. ಮುಂದಿನ 10 ವರ್ಷಗಳಲ್ಲಿ 536 ಮೆಮು (ಮೇನ್​ಲೈನ್ ಇಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಬೋಗಿಗಳಿರುವ ರೈಲುಗಳನ್ನು ನೀಡುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 134 ಡ್ರೖೆವರ್ ಮೋಟರ್ ಕ್ಯಾಬ್​ಗಳು ಸಹ ಈ ಪ್ರಸ್ತಾವನೆಯಲ್ಲಿ ಸೇರಿವೆ. ಸದ್ಯಕ್ಕೆ ನೈಋತ್ಯ ವಲಯ ವ್ಯಾಪ್ತಿಯಲ್ಲಿ ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಬೆಂಗಳೂರು- ಮೈಸೂರು ಸೇರಿ ಇನ್ನೂ ಕೆಲ ಮಾರ್ಗಗಳಲ್ಲಿ ಮಾತ್ರ ಮೆಮು ರೈಲುಗಳು ಸಂಚರಿಸುತ್ತಿವೆ.

ಮೆಮು ವೈಶಿಷ್ಟ್ಯಗಳು: ಪ್ರತಿ ಸಾಮಾನ್ಯ ಬೋಗಿಗಳಲ್ಲಿ 76 ಆಸನಗಳು ಇದ್ದರೆ, ಮೆಮು ಬೋಗಿಗಳಲ್ಲಿ 100 ಆಸನಗಳು ಇರುತ್ತವೆ. ಒಂದು ರೈಲಿಗೆ 8ರಿಂದ 16ರವರೆಗೆ ಬೋಗಿಗಳನ್ನು ಜೋಡಿಸಬಹುದು. ಸಾಮಾನ್ಯ ರೈಲಿನ ಒಂದು ಕಡೆಗೆ ಮಾತ್ರ ಇಂಜಿನ್ ಇರುತ್ತದೆ. ರೈಲು ಒಂದು ಮಾರ್ಗದಲ್ಲಿ ತೆರಳಿ, ಮತ್ತೆ ಅದೇ ಮಾರ್ಗದಲ್ಲಿ ಹಿಂದಿರುಗಿ ಬರಬೇಕೆಂದರೆ ಮುಂಬದಿ ಇರುವ ಇಂಜಿನ್ ಅನ್ನು ತೆಗೆದು, ಹಿಂಬದಿಗೆ ಜೋಡಿಸಬೇಕಾಗುತ್ತದೆ. ಆದರೆ ಮೆಮು ಬೋಗಿಗಳ ಎರಡೂ ಬದಿ ಇಂಜಿನ್ ಇರುತ್ತದೆ. ಇದಕ್ಕೆ ಡ್ರೖೆವರ್ ಮೋಟರ್ ಕ್ಯಾಬ್ ಎನ್ನುತ್ತಾರೆ. ಇದರಿಂದ ಇಂಜಿನ್ ಬದಲಾಯಿಸುವ ಸಮಯದಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ. ಮೆಮು ಬೋಗಿಗಳಲ್ಲಿ ಮಲಗುವ ಆಸನಗಳು ಇರುವುದಿಲ್ಲ. ಕೇವಲ ಕುಳಿತುಕೊಂಡು ಪ್ರಯಾಣಿಸಬಹುದು. ಇವುಗಳು ದೂರದ ಸಂಚಾರಕ್ಕೆ ಯೋಗ್ಯವಲ್ಲ. ಹಗಲು ಹೊತ್ತಿನಲ್ಲಿ ಸಣ್ಣ ಹಾಗೂ ಮಧ್ಯಮ ದೂರದ ಪ್ರಯಾಣಕ್ಕಷ್ಟೇ ಯೋಗ್ಯ. ವಿದ್ಯುದ್ದೀಕರಣ ಸೌಲಭ್ಯ ಹೊಂದಿರುವ ಎಲ್ಲ ಮಾರ್ಗಗಳಲ್ಲಿ ರೈಲುಗಳು ಪ್ರತಿ ತಾಸಿಗೆ 100 ಕಿಮೀ ವೇಗದಲ್ಲಿ ಸಂಚರಿಸಲಿವೆ.

ನೈಋತ್ಯ ರೈಲ್ವೆ ವಲಯಕ್ಕೆ ಎಷ್ಟು ಮೆಮು ಬೋಗಿಗಳು ಮಂಜೂರು ಆಗುತ್ತವೆ ಎಂಬುದನ್ನು ನೋಡಿಕೊಂಡು ಹಾಗೂ ಬೇಡಿಕೆಗೆ ಅನುಗುಣವಾಗಿ ಪ್ರತಿ ವಿಭಾಗಕ್ಕೆ ಈ ಬೋಗಿಗಳನ್ನು ಹಂಚಿಕೆ ಮಾಡಲಾಗುವುದು. ಮಾರ್ಗ ವಿದ್ಯುದ್ದೀಕರಣ ಪೂರ್ಣಗೊಳ್ಳುತ್ತಿದ್ದಂತೆ ಮೆಮು ಬೋಗಿಗಳಿರುವ ರೈಲುಗಳ ಸಂಚಾರ ಪ್ರಾರಂಭಿಸಲಾಗುವುದು.

| ಅನಿಶ ಹೆಗಡೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net