ಬಸವೇಶ್ವರ ವೃತ್ತದಲ್ಲಿ ಮದ್ಯದಂಗಡಿ ಬೇಡ

14NGD5
Published on

ನಂಜನಗೂಡು: ನಗರದ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆದಿದ್ದು, ಇದನ್ನು ತಡೆಹಿಡಿಯಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ಶನಿವಾರ ವಿವಿಧ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು.
ಕರ್ನಾಟಕ ಪ್ರತಿಧ್ವನಿ ವೇದಿಕೆ, ವೀರಶೈವ ಸಂಘಟನೆಗಳು ಹಾಗೂ ದೇವೀರಮ್ಮನಹಳ್ಳಿ ಬಡಾವಣೆಗಳ ನಿವಾಸಿಗಳು ಒಗ್ಗೂಡಿ ಪ್ರವಾಸಿ ಮಂದಿರದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು. ಬಸವೇಶ್ವರ ವೃತ್ತದಲ್ಲಿ ಸರ್ಕಾರಿ ಪದವಿ ಕಾಲೇಜು, ನ್ಯಾಕ್ ಮಾನ್ಯತೆ ಪಡೆದಿರುವ ಜೆಎಸ್‌ಎಸ್ ಪದವಿ ಕಾಲೇಜು, ಶರಣ ಸಂಗಮ ಮಠಕ್ಕೆ ಹೋಗುವ ರಸ್ತೆ ಇದೆ. ಇಂಥ ವೃತ್ತದಲ್ಲಿ ಖಾಸಗಿಯವರು ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರಿಗೆ ತೊಂದರೆಯಾಗಲಿದೆ. ಬಾರ್ ತೆರೆಯುವ ಹುನ್ನಾರವನ್ನು ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಮುಖಂಡರು ಶಾಸಕರಿಗೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಶಾಸಕ ದರ್ಶನ್ ಧ್ರುವನಾರಾಯಣ ಕ್ರಮ ವಹಿಸುವ ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ತ್ರಿಣೇಶ್, ಕೆ.ಗುರುಸಿದ್ದಪ್ಪ, ಗುರುಮಲ್ಲೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ನಂದಿನಿ, ನಿರ್ದೇಶಕಿ ಕೋಮಲಾ, ಟಿಎಪಿಸಿಎಂಎಸ್ ನಿರ್ದೇಶಕಿ ಮಂಜುಳಾ ಮಧು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net