

ಶಿವಮೊಗ್ಗ: ಯಾವುದೇ ಸಂಘ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಉತ್ತಮ ಬೆಳವಣಿಗೆ ಸಾಧಿಸುವಲ್ಲಿ ಸದಸ್ಯರ ಪಾತ್ರ ಮುಖ್ಯ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಪೂರ್ವದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳನ್ನು ಮುನ್ನಡೆಸುವವರಿಗೆ ನಾಯಕತ್ವದ ಗುಣವಿರಬೇಕು. ಅವರು ಸನ್ನಡತೆ ಹೊಂದಿರಬೇಕು ಎಂದರು.
ಸಂಘದ ಸದಸ್ಯರಲ್ಲಿ ಕ್ರಿಯಾಶೀಲತೆ ಇರಬೇಕು. ಸಂಘವನ್ನು ಮುನ್ನಡೆಸುವವರಲ್ಲಿ ಸಹನೆಯಿರಬೇಕು. ರೋಟರಿ ಸಂಸ್ಥೆಯು ಸೇವಾ ಉದ್ದೇಶಕ್ಕಾಗಿ ಆರಂಭಗೊಂಡಿದ್ದು, 220 ದೇಶಗಳಲ್ಲಿ ಸಕ್ರಿಯವಾಗಿದೆ. ರೋಟರಿ ಸಂಸ್ಥೆಯಿಂದ ಸಂಪರ್ಕ ಕೌಶಲ ಹೊಂದಲು ಸಹಾಯವಾಗುತ್ತದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಜೀವನ ಕೌಶಲ, ಒಡನಾಟ ಹಾಗೂ ಸೇವೆಯ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹೆಚ್ಚು ಜನ ರೋಟರಿ ಸಂಸ್ಥೆಗೆ ಸೇರಬೇಕು. ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ ರಾಯ್ಕರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಮಾಜಿ ಅಧ್ಯಕ್ಷ ಅರುಣ್ ದೀಕ್ಷಿತ್, ಡಾ. ಗುಡದಪ್ಪ ಕಸಬಿ, ವೀಣಾ ಕಿಶೋರ್ ಇತರರಿದ್ದರು.