ಭಾರತದ ಪ್ರವಾಸದಲ್ಲಿ ಪಡೆದ ಆತ್ಮೀಯ ಸ್ವಾಗತ ನೆನೆದು, ಧನ್ಯವಾದ ತಿಳಿಸಿದ ಅಮೆರಿಕ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​

MELENIA
Published on

ನವದೆಹಲಿ: ಕಳೆದ ಕೆಲ ದಿನಗಳ ಹಿಂದಷ್ಟೆ ಎರಡು ದಿನಗಳ ಭಾರತ ಪ್ರವಾಸ ಮುಗಿಸಿ ವಾಪಸ್​ ತೆರಳಿದ್ದ ಮೆಲನಿಯಾ ಟ್ರಂಪ್​ ಸರಣಿ ಟ್ವೀಟ್​ಗಳನ್ನು ಮಾಡಿ ಧನ್ಯವಾದ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ ಅವರು ಮಂಗಳವಾರ (ಫೆ.26) ರಾತ್ರಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಸರಣಿ ಟ್ವಿಟ್​ ಮಾಡಿರುವ ಮೆಲನಿಯಾ ಟ್ರಂಪ್​ ಅವರು, ಆತ್ಮೀಯ ಸ್ವಾಗತ ಕೋರಿದ್ದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಮತ್ತಿತರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟಕ್ಕೆ ಸ್ವಾಗತ ಕೋರಿದ ರಾಷ್ಟ್ರಪತಿ ಮತ್ತು ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಧನ್ಯವಾದಗಳು. ಅದೊಂದು ಸುಂದರ ದಿನ ಎಂದಿದ್ದಾರೆ.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತ, ರಾಜ್​ಘಾಟ್​ನ ನೆನಪುಗಳು ಸುಂದರ, ಅಲ್ಲಿ ಗಿಡ ನೆಟ್ಟಿದ್ದು ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.

ದೆಹಲಿ ಶಾಲೆಗಳಿಗೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡು, ಹ್ಯಾಪಿನೆಸ್​ ಕ್ಲಾಸ್​ ಎಂದು ಬಣ್ಣಿಸಿದ್ದಾರೆ. ಶಾಲೆಗಳನ್ನು ಪರಿಚಯಿಸಿದ ಶಿಕ್ಷಕಿ ಮನು ಗುಲಾಟಿ ಅವರಿಗೂ ಅಭಿನಂದನೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮನು ಗುಲಾಟಿ ಅವರು, ನಮ್ಮ ಮಕ್ಕಳು ನಿಮ್ಮನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದರು. ಅವರೆಲ್ಲ ನಿಮ್ಮನ್ನು ಆರಾಧಿಸುತ್ತಾರೆ, ನೀವು ತೆರಳಿದ ಮೇಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ಅಲ್ಲದೆ ಅಮೆರಿಕದ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಯ ಕುಟುಂಬಗಳನ್ನು ಭಾರತದಲ್ಲಿ ಭೇಟಿ ಮಾಡಿದ್ದು ಸಂತಸ ತಂದಿದೆ ಎಂದು ಅಮೆರಿಕ ಪ್ರಥಮ ಮಹಿಳೆ ಶ್ಲಾಘಿಸಿದ್ದಾರೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net