

ದಾವಣಗೆರೆ: ಈ ಬಾರಿ ಮಳೆ ಹೆಚ್ಚಾಗಿ ರಾಜ್ಯದ ಅನೇಕ ಕಡೆಗಳಲ್ಲಿ ರೈತರಿಗೆ ನಷ್ಟವಾಗಿತ್ತು. ಈ ನಡುವೆ ದಾವಣಗೆರೆ ಬಳಿಯ ಕೆಲವು ಗ್ರಾಮಗಳ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಇನ್ನೇನು ಕೊಯ್ಲಿಗೆ ತಯಾರಾಗಿದ್ದ ಮೆಕ್ಕೆ ಜೋಳ, ಬೆಂಕಿಯ ಕೆನ್ನಾಲಗೆಗೆ ಆಹಾರವಾಗಿ ಹೋಗಿದೆ.
ಆಕಸ್ಮಿಕ ಬೆಂಕಿಯಿಂದಾಗಿ ಕಾಡು ಸೇರಿದಂತೆ ನೂರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ ಭಸ್ಮವಾಗಿ ಹೋಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ಸಂಜೆ ಈ ಘಟನೆ ನಡೆದಿದ್ದು ಕೊಯ್ಲು ಕೆಲಸಕ್ಕೆ ಇಳಿದಿದ್ದ ರೈತರು ಆಘಾತಕ್ಕೆ ಒಳಗಾಗಿದ್ದಾರೆ.
ಮೆಕ್ಕೆ ಜೋಳ ಹುಲುಸಾಗಿ ಬೆಳೆದು ತಲೆಯೆತ್ತಿ ನಿಂತಿತ್ತು. ಅತಿವೃಷ್ಟಿಯಿಂದಾಗಿ ಕಷ್ಟ ಅನುಭವಿಸಿದ್ದ ರೈತರು ಕಡೆಗೂ ಒಳ್ಳೆಯ ಬೆಳೆ ಕೈಗೆ ಬಂದಿದೆ ಎಂದು ಖುಷಿಯಲ್ಲಿ ಇದ್ದಾಗಲೇ ಈ ಘಟನೆ ನಡೆದಿದೆ. ಗ್ರಾಮಗಳಲ್ಲಿ ಭಾಗಶಃ ಮೆಕ್ಕೆ ಜೋಳವನ್ನು ಕೊಯ್ಲು ಮಾಡಿ ರಾಶಿ ಹಾಕಲಾಗಿತ್ತು. ಅದರ ಜೊತೆಗೆ ಗದ್ದೆಯಲ್ಲಿ ಇನವನೂ ಸ್ವಲ್ಪ ಬೆಳೆ ಕೊಯ್ಲಿಗೆ ಬಾಕಿ ಉಳಿದಿತ್ತು.
ಈ ನಡುವೆ ಹುಟ್ಟಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಬೆಳೆ ನಾಶ ಆಗಿದ್ದು ಮಾತ್ರವಲ್ಲ. ಜೊತೆಗೆ ಬಹಳಷ್ಟು ಅರಣ್ಯ ಪ್ರದೇಶವೂ ಹಾನಿಗೆ ಈಡಾಗಿದೆ. ವೀರಪ್ಪನ ಮಟ್ಟಿ (ಅರಮಘಟ್ಟ) ಅರಣ್ಯ ಸೇರಿ ನೂರಾರು ಎಕರೆ ಜಮೀನಿಗೆ ಬೆಂಕಿ ಬಿದ್ದಾಗ ಹೊನ್ನಾಳಿ ಮತ್ತು ಶಿವಮೊಗ್ಗ ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದ್ದಾರೆ.
ಬೆಂಕಿಗೆ ಸುಟ್ಟು ಕರಕಲಾದ ಮೆಕ್ಕೆ ಜೋಳ ಗ್ರಾಮದ ಅನೇಕ ರೈತರಿಗೆ ಸೇರಿತ್ತು. ಈಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ರೈತರ ಒತ್ತಾಯ ಮಾಡುತ್ತಿದ್ದಾರೆ. ಒಟ್ಟು ನಷ್ಟ ಆಗಿದೆ ಎಂಬ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ.