

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ.6.45ಕ್ಕೆ ಜಿಗಿತಕಂಡು ಸಂಭಾವ್ಯ ಅನಾಹುತದ ಮುನ್ಸೂಚನೆ ನೀಡಿರುವ ಹೊರತಾಗಿಯೂ ಮೇಕೆದಾಟು ಯೋಜನೆಗಾಗಿ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಕೋವಿಡ್ ವ್ಯಾಪಕವಾಗುತ್ತಿರುವ ಹಿನ್ನೆಯಲ್ಲಿ ಸಭೆ, ಸಮಾರಂಭ, ರಾಜಕೀಯ ರ್ಯಾಲಿಗಳಿಗೆ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ನಾಯಕರು ಸಭೆ ನಡೆಸಿ, ಪಾದಯಾತ್ರೆ ನಿಲ್ಲಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದರು.
ಹಾಗೆಯೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಜನರಿಗೆ ಕರೊನಾ ಬರಬಾರದು ಎಂಬುದು ನಮ್ಮ ಆಶಯ. ಹಾಗಾಗಿ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಿ ಪಾದಯಾತ್ರೆ ಮಾಡುತ್ತೇವೆ ಎಂದರು. ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ಪಾದಯಾತ್ರೆ ಮಾಡಬಾರದೆಂದು ಷಡ್ಯಂತ್ರ ರೂಪಿಸಿದೆ ಎಂದು ಟೀಕಿಸಿದ ಸಿದ್ದರಾಮಯ್ಯ, ‘ಡಾ.ಸುಧಾಕರ್, ಈಶ್ವರಪ್ಪ ಹೇಳಿದ್ದನ್ನೆಲ್ಲ ಕೇಳೋಕಲ್ಲ ನಾವಿರೋದು. ನಮ್ಮ ಕರ್ತವ್ಯ ಏನು ಎಂದು ನಮಗೆ ಗೊತ್ತು, ಅದನ್ನು ನಾವು ಮಾಡುತ್ತೇವೆ’ ಎಂದು ಹೇಳಿದರು.
ನಾವು ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡೆಯುತ್ತೇವೆ. ಒಂದು ವೇಳೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡದೆ ಇದ್ದರೆ ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ವಿವಿಧ ಪಟ್ಟಣಗಳ ಮೂಲಕ ಹಾದು ಬರುವ ಪಾದಯಾತ್ರೆ ಬೆಂಗಳೂರಿನಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಕೊನೆಗೆ ಜ.19ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರ್ಯಾಲಿಯೊಂದಿಗೆ ಕೊನೆಗೊಳ್ಳಲಿದೆ. ಈ ಸಂಬಂಧ ಎರಡು ತಿಂಗಳಿಂದ ಪೂರ್ವತಯಾರಿ ನಡೆದಿತ್ತು.
ನಾಗಮಂಗಲ: ಕರೊನಾ ಎಲ್ಲರಿಗೂ ಒಂದೇ. ಅದೇನು ಪಕ್ಷ ಆಧಾರಿತವಾಗಿ ಬರುವುದಿಲ್ಲ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಬಿಜಿ ನಗರದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಹಿಂದಿನ ಎರಡು ಅಲೆಯ ಅನುಭವದಿಂದ ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವೆಂದು ‘ಪಾದಯಾತ್ರೆ ಮಾಡುತ್ತೇವೆ’ ಎನ್ನುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಕರೊನಾ ನಿಯಂತ್ರಣಕ್ಕಾಗಿಯೇ ಒಂದು ಕಾನೂನು ಇದೆ. ವಿರೋಧ ಪಕ್ಷಕ್ಕೂ ತನ್ನದೇ ಆದ ಕರ್ತವ್ಯ ಇದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಡೆದುಕೊಳ್ಳ ಬೇಕೆಂಬ ಅಪೇಕ್ಷೆ ನನಗೆ ಇದೆ. ಇಲ್ಲ ನಾವು ಹೀಗೇ ನಡೆದು ಕೊಳ್ಳುತ್ತೇವೆ ಎಂದರೆ ಜನರು ಗಮನಿಸುತ್ತಾರೆ ಎಂದರು.
ಜನರ ಹಿತಕ್ಕಾಗಿ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದೇವೆಂದು ಹೇಳುತ್ತಾರೆ. ಆದರೆ ಜನರ ಆರೋಗ್ಯ ಹಿತದೃಷ್ಟಿಯಿಂದ ಜಾರಿಗೊಳಿಸಿದ ನಿರ್ಬಂಧಗಳ ಬಗ್ಗೆ ಲಘುವಾದ ಹೇಳಿಕೆ ನೀಡುತ್ತಿದ್ದಾರೆ. ನಿರ್ಬಂಧ ಉಲ್ಲಂಘಿಸುತ್ತೇವೆ ಎನ್ನುವುದಾದರೆ ಕಾನೂನು ತನ್ನ ಕೆಲಸ ಮಾಡುತ್ತದೆ. | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ
ಬಿಜೆಪಿ ಬೈಠಕ್ ಮುಂದೂಡಿಕೆ: ಕರೊನಾ ಸೋಂಕು ಉಲ್ಬಣ, ನಿಯಂತ್ರಣಕ್ಕಾಗಿ ಸರ್ಕಾರ ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಮಟ್ಟದ ‘ಚಿಂತನ ಬೈಠಕ್’ ಮುಂದೂಡಿಕೆಯಾಗಿದೆ. ನಂದಿಬೆಟ್ಟದ ರೆಸಾರ್ಟ್ವೊಂದರಲ್ಲಿ ಜ.7ರಿಂದ ಮೂರು ದಿನಗಳ ಚಿಂತನ ಬೈಠಕ್ನಲ್ಲಿ ಮೊದಲ ದಿನ ರಾಜ್ಯ ಪದಾಧಿಕಾರಿಗಳು, 2ನೇ ದಿನಪೂರ್ತಿ ಸಚಿವರಿಗೆ ‘ಕ್ಲಾಸ್’ ಹಾಗೂ ಮೂರನೇ ದಿನ ಕೋರ್ ಕಮಿಟಿ ಸಭೆಗೆ ಸಿದ್ಧತೆಗಳು ನಡೆದಿದ್ದವು. ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಆಕ್ಷೇಪಿಸಿ ಮತ್ತೊಂದೆಡೆ ಬೈಠಕ್ ನಡೆಸಿದರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಕಾರಣಕ್ಕೆ ಮುಂದೂಡಲು ಪಕ್ಷ ತೀರ್ವನಿಸಿತು ಎಂದು ಮೂಲಗಳು ಮಾಹಿತಿ ನೀಡಿವೆ.