

ಬೆಂಗಳೂರು: ಕಾವೇರಿ ನದಿಗೇ ಮೇಕೆದಾಟುನಲ್ಲಿ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಸದ್ದಿಲ್ಲದೇ ಪ್ರಯತ್ನ ಆರಂಭಿಸಿದೆ.
ಲಭ್ಯ ಮಾಹಿತಿ ಪ್ರಕಾರ ಕೇಂದ್ರದ ಪರಿಸರ ಇಲಾಖೆಯಿಂದ ಅಗತ್ಯ ಅನುಮತಿ ಬೇಕಾಗುತ್ತದೆ. ಜತೆಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಗಮನಕ್ಕೂ ತರಬೇಕಾಗುತ್ತದೆ. ಇಷ್ಟರ ನಡುವೆ ಅನುದಾನ ಹೊಂದಾಣಿಕೆ ಮತ್ತು ಜಲಾಶಯ ನಿರ್ಮಾಣಕ್ಕೆ ಅಗತ್ಯ ಪೂರ್ವ ತಯಾರಿ ಮಾಡಲು ಜಲಸಂಪನ್ಮೂಲ ಇಲಾಖೆ ವಿಶೇಷ ವಿಭಾಗವೊಂದನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ.
ಜಲಾಶಯ ನಿರ್ಮಾಣದಿಂದ ಎಷ್ಟು ಮರಗಳು ನಷ್ಟವಾಗುತ್ತದೆ ಎಂಬ ಲೆಕ್ಕಹಾಕುವಿಕೆಯ ಕೆಲಸ ಕೂಡ ಅನೌಪಚಾರಿಕ ರೂಪದಲ್ಲಿ ಕೂಡ ನಡೆದಿದೆ. ಶೀಘ್ರವೇ ಅನುಮತಿ ಕೋರಿ ಕೇಂದ್ರದ ಮೇಲೆ ಒತ್ತಡ ಹೇರಲೂ ಸಹ ಸರ್ಕಾರ ನಿರ್ಧರಿಸಿದೆ.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಹೊಸ ಡ್ಯಾಂ ನಿರ್ಮಾಣದ ಕುರಿತಂತೆಯೂ ಅಭಿಪ್ರಾಯ ನೀಡಿತ್ತು. ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ, ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಆ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಧನಾತ್ಮಕವಾಗಿ ಪರಿಗಣಿಸಿ ಹೆಜ್ಜೆ ಮುಂದಿಟ್ಟಿದೆ.
ಮೇಕೆದಾಟು ಜಲಾಶಯ ನಿರ್ಮಾಣವಾದರೆ 66 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಕೆಆರ್‌ಎಸ್, ಕಬಿನಿ, ಹೇಮಾವತಿ ಆಣೆಕಟ್ಟೆಗಳ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ ಎಂಬುದು ಜಲಸಂಪನ್ಮೂಲ ಖಾತೆ ಹೊಂದಿರುವ ಡಿ.ಕೆ ಶಿವಕುಮಾರ್ ಅಭಿಪ್ರಾಯವಾಗಿದೆ.