ಕೋಟ್ಯಂತರ ರೂಪಾಯಿ ವಂಚಿಸಿ ದೇಶಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಅರೆಸ್ಟ್​! Mehul Choksi

Mehul Choksi
Published on

Mehul Choksi : ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ಉದ್ಯಮಿ ಮೆಹುಲ್​ ಚೋಕ್ಸಿಯನ್ನು ಬೆಲ್ಜಿಯಂ ಅಧಿಕಾರಿಗಳು ಬಂಧಿಸಿರುವುದಾಗಿ ಸೋಮವಾರ (ಏಪ್ರಿಲ್​ 14) ವರದಿಯಾಗಿದೆ.

ಈಗಾಗಲೇ ಮುಂಬೈ ನ್ಯಾಯಾಲಯಗಳು ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದ್ದು, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಚೋಕ್ಸಿಯನ್ನು ಬೆಲ್ಜಿಯಂ ಅಧಿಕಾರಿಗಳು ಬಂಧಿಸಿದ್ದಾರೆ.

ವಂಚಕ ಚೋಕ್ಸಿ 2018ರಲ್ಲಿ ಪರಾರಿಯಾಗಿದ್ದ. ಅಂದಿನಿಂದ ಆತನ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಲೇ ಇತ್ತು. ಚೋಕ್ಸಿಯನ್ನು ಹೇಗಾದರೂ ಮಾಡಿ ಭಾರತಕ್ಕೆ ಕರೆತರಬೇಕು ಅಂತ ಇಡಿ ಮತ್ತು ಸಿಬಿಐ ತಮ್ಮ ಪ್ರಯತ್ನವನ್ನು ಆರಂಭಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಚೋಕ್ಸಿ ಅನಾರೋಗ್ಯದ ಕಾರಣ ನೀಡಿ ಯುರೋಪ್‌ಗೆ ಪ್ರಯಾಣ ಬೆಳೆಸಿದ್ದ. ಇತ್ತ ಭಾರತೀಯ ಅಧಿಕಾರಿಗಳು ಹಸ್ತಾಂತರ ಪ್ರಯತ್ನಗಳನ್ನು ಚುರುಕುಗೊಳಿಸಿತು. ಇದಾದ ಕೆಲವೇ ದಿನಗಳಲ್ಲಿ ಬೆಲ್ಜಿಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತನನ್ನು ಬಂಧಿಸಲಾಗಿದೆ.

ಸದ್ಯ ಚೋಕ್ಸಿಯನ್ನು ಬೆಲ್ಜಿಯಂನ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಬೆಲ್ಜಿಯಂನಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಚೋಕ್ಸಿ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಆತ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬೆಲ್ಜಿಯಂನಿಂದ ಸ್ವಿಟ್ಜರ್ಲೆಂಡ್‌ಗೆ ತೆರಳಲು ಪ್ಲಾನ್​ ಮಾಡುತ್ತಿದ್ದಾಗ ಆಸ್ಪತ್ರೆಯಲ್ಲೇ ಚೋಕ್ಸಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2024, ಸೆಪ್ಟೆಂಬರ್ ತಿಂಗಳಲ್ಲಿ ಇಡಿ ಮತ್ತು ಸಿಬಿಐ ಹಸ್ತಾಂತರ ವಿನಂತಿಗಳನ್ನು ಸಲ್ಲಿಸಿದ ನಂತರ ಈ ಕ್ರಮವನ್ನು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಚೋಕ್ಸಿ ಪರ ವಕೀಲರು ಆತ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ ಮತ್ತು ಪ್ರಯಾಣಕ್ಕೆ ಅನರ್ಹ ಎಂದು ವಾದಿಸಿದರು. ಆದಾಗ್ಯೂ, ಭಾರತೀಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಈ ಹಕ್ಕನ್ನು ವಿರೋಧಿಸಿದರು. ಚೋಕ್ಸಿ ವೈದ್ಯಕೀಯ ಚಿಕಿತ್ಸೆಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ಹಾರಲು ಸಾಧ್ಯವಾಗಿರುವಾಗ, ಸಾಕಷ್ಟು ಆರೈಕೆ ಲಭ್ಯವಿರುವ ಭಾರತಕ್ಕೆ ಮರಳಬಹುದು ಎಂದು ವಾದಿಸಿತು. ಇದಾದ ಬಳಿಕ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ತೆಗೆದುಹಾಕಿದ ನಂತರ ಭಾರತೀಯ ಸಂಸ್ಥೆಗಳು ಹಸ್ತಾಂತರ ವಿನಂತಿಗಳನ್ನು ಮತ್ತೆ ಸಕ್ರಿಯಗೊಳಿಸಿದವು. ಅಂತಿಮವಾಗಿ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ.

ಇನ್ನು ಭಾರತೀಯ ಅಧಿಕಾರಿಗಳು ಚೋಕ್ಸಿಯನ್ನು ವಿಚಾರಣೆಗೆ ಒಳಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹಸ್ತಾಂತರ ಪ್ರಕ್ರಿಯೆ ದೀರ್ಘಕಾಲ ನಡೆಯುವುದರಿಂದ, ಚೋಕ್ಸಿ ತನ್ನ ವಿರುದ್ಧದ ಗಡೀಪಾರು ಕ್ರಮವನ್ನು ವಿರೋಧಿಸಲು ಬೆಲ್ಜಿಯಂ ನ್ಯಾಯಾಲಯಗಳಲ್ಲಿ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಅನುಸರಿಸುವ ಸಾಧ್ಯತೆಯಿದೆ. ಅಲ್ಲದೆ, ಶೀಘ್ರದಲ್ಲೇ ವೈದ್ಯಕೀಯ ಆಧಾರದ ಮೇಲೆ ಜಾಮೀನು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಮೂಲಗಳು ದೃಢಪಡಿಸಿವೆ. ತನಗಿರುವ ಕಾನೂನು ರಕ್ಷಣೆಯ ಭಾಗವಾಗಿ ಆಂಟಿಗುವಾದಲ್ಲಿ ಭಾರತೀಯ ಕಾರ್ಯಕರ್ತರು ಈ ಹಿಂದೆ ನಡೆಸಿದ್ದ "ಅಪಹರಣ ಪ್ರಯತ್ನ"ದ ಆರೋಪವನ್ನು ಚೋಕ್ಸಿ ಉಲ್ಲೇಖಿಸುವ ಸಾಧ್ಯತೆಯಿದೆ. ಈ ಎಲ್ಲ ಸವಾಲುಗಳ ಹೊರತಾಗಿಯೂ, ಚೋಕ್ಸಿಗೆ ಜಾಮೀನು ದೊರೆತರೂ, ಆತ ಆಂಟಿಗುವಾಗೆ ಮರಳಲು ಅವಕಾಶ ಸಿಗುವುದಿಲ್ಲ ಎಂದು ಭಾರತೀಯ ಸಂಸ್ಥೆಗಳು ಆಶಿಸುತ್ತಿವೆ. ಹೀಗಾಗಿ ಆತನನ್ನು ಮರಳಿ ಕರೆತರಲು ಇರುವ ಪರ್ಯಾಯ ಮಾರ್ಗ ಗಡೀಪಾರಿನ ಸಾಧ್ಯತೆಯನ್ನು ಭಾರತ ಹುಡುಕುತ್ತಿದೆ.

ತನ್ನ ಸಹೋದರ ನೀರವ್ ಮೋದಿ ಸಂಬಂಧಿ ಜತೆಗೂಡಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಿದ್ದು, ಇದರಲ್ಲಿ ಚೋಕ್ಸಿಯ ಪಾಲು 7 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಹುಲ್ ಚೋಕ್ಸಿ ವಿರುದ್ದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿವೆ. ಈತನ ಬಂಧನಕ್ಕೆ ನೆರವಾಗಬೇಕೆಂದು ಸಿಬಿಐ ಹಾಗೂ ಇ.ಡಿ. ಮಾಡಿದ್ದ ಮನವಿ ಪುರಸ್ಕರಿಸಿರುವ ಇಂಟರ್​ಪೋಲ್, ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net