

ಟಾಲಿವುಡ್ನಲ್ಲಿ ಸಸಿ ನೆಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗಾರ್ಜುನ್ ಸಸಿ ನೆಡುವ ಫೋಟೋ ಶೇರ್ ಮಾಡಿಕೊಂಡು, ಅದೇ ರೀತಿ ಗಿಡಗಳನ್ನು ನೆಡುವಂತೆ ಒಂದಷ್ಟು ಸಿನಿಮಾ ನಟಿಯರಿಗೆ ಕೋರಿದ್ದರು. ರಶ್ಮಿಕಾ ಮಂದಣ್ಣ ಸಹ ಸಮಂತಾ ಕೋರಿಕೆಯಂತೆ ಗಿಡ ನೆಟ್ಟು ಇತರರಿಗೆ ಮಾದರಿಯಾಗಿದ್ದರು. ಇದೀಗ ಇದೆಲ್ಲದಕ್ಕಿಂತ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗಷ್ಟೇ ಮೀಸೆ ಬೋಳಿಸಿಕೊಂಡು, ಹೊಸ ಲುಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎದುರಾಗಿದ್ದರು. ಇದೀಗ ಇದೇ ಚಿರಂಜೀವಿ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದೇ ಒಂದು ಲಕ್ಷ ಸಸಿ ನೆಡುವ ಅಭಿಯಾನ.
ಹೌದು, ಹೈದರಾಬಾದ್ನ ಜುಬಿಲಿ ಹಿಲ್ಸ್ನ ಇಂಟರ್ನ್ಯಾಶನಲ್ ಕಲ್ಚರಲ್ ಸೆಂಟರ್ನಲ್ಲಿ ಒಂದು ಲಕ್ಷ ಮರ ನೆಡುವ ಬೃಹತ್ ಅಭಿಯಾನಕ್ಕೆ ಚಿರಂಜೀವಿ ಸಾಥ್ ನೀಡಿದ್ದಾರೆ. ಒಂದಷ್ಟು ಸಸಿಗಳನ್ನು ನೆಟ್ಟು, ಇತರರಿಗೂ ನೆಡುವಂತೆ ಕೋರಿದ್ದಾರೆ. ವಿಶೇಷ ಎಂಬಂತೆ ಚಿರಂಜೀವಿ ಜತೆಗೆ ಸಹೋದರ ಪವನ್ ಕಲ್ಯಾಣ್ ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು, ಸಸಿ ನೆಟ್ಟರು. ಈ ಅಭಿಯಾನದಲ್ಲಿ ನಿರ್ದೇಶಕರಾದ ಅನಿಲ್ ರವಿಪುಡಿ, ಬೊಯಾಪಟಿ ಸೀನು ಸಹ ಪಾಲ್ಗೊಂಡಿದ್ದರು. (ಏಜೆನ್ಸೀಸ್)