ಮೆಗ್ಗಾನ್ ಜಿಲ್ಲಾಸ್ಪತ್ರೆ ನವಜಾತ ಶಿಶು ಅದಲು ಬದಲು !

mcggan hospital
ಮೆಗ್ಗಾನ್ ಜಿಲ್ಲಾಸ್ಪತ್ರೆ
Published on

ಶಿವಮೊಗ್ಗ: ಸದಾ ಒಂದಿಲ್ಲೊಂದು ಅವಾಂತರಗಳ ಮೂಲ ಸುದ್ದಿಯಲ್ಲಿರುವ ಮೆಗ್ಗಾನ್ ಜಿಲ್ಲಾಸ್ಪತ್ರೆ ಈ ಬಾರಿ ಹೆರಿಗೆ ವಾರ್ಡ್‌ನಲ್ಲಿ ನವಜಾತ ಶಿಶುವಿನ ಅದಲು ಬದಲಿನ ಮೂಲಕ ಸದ್ದು ಮಾಡಿದೆ. ಒಂದೇ ಗಂಟೆಯಲ್ಲಿ ಶಿಶುಗಳು ಹೆತ್ತವರು ಮಡಿಲು ಸೇರುವ ಮೂಲಕ ಅದಲು ಬದಲು ಪ್ರಕರಣ ಸುಖಾಂತ್ಯ ಕಂಡಿದೆ.

ಶಿಕಾರಿಪುರದ ಸಬೀನಾ ಬಾನು ಎಂಬುವರಿಗೆ ಬುಧವಾರ ಬೆಳಗ್ಗೆ ಹೆರಿಗೆ ಆಗಿತ್ತು. ಅದೇ ದಿನ ಕಾವ್ಯಾ ಎಂಬುವರಿಗೂ ಮಗು ಜನಿಸಿತ್ತು. ಸಿಬ್ಬಂದಿ ಸಬೀನಾ ಬಾನು ಸಂಬಂಧಿಕರಿಗೆ ಗಂಡು ಮಗು ಆಗಿದೆ ಎಂದು ತಿಳಿಸಿದ್ದರು. ಗಂಡು ಜನಿಸಿದ ಖುಷಿಯಲ್ಲಿ ಸಬೀನಾ ಕುಟುಂಬಸ್ಥರಿದ್ದರು. ಆದರೆ ಮಗು ಹುಟ್ಟಿದ ಒಂದು ಗಂಟೆ ಬಳಿಕ ಗಂಡು ಮಗು ನಿಮ್ಮದಲ್ಲ, ನಿಮ್ಮದು ಹೆಣ್ಣು ಮಗುವೆಂದು ಹೇಳಿ ಗಂಡು ಮಗುವನ್ನು ಹಿಂಪಡೆದಿದ್ದರು.
ಹೆರಿಗೆಯಾದ ಬಳಿಕ ಶಿಶುವಿನ ಕೈಗೆ ತಾಯಿ ಹೆಸರಿನ ಟ್ಯಾಗ್ ಹಾಕಲಾಗುತ್ತದೆ. ಗಂಡು ಮಗುವಿನ ಕೈಗೆ ಹಾಕಿದ್ದ ಟ್ಯಾಗ್‌ನಲ್ಲಿ ಸಬೀನಾ ಹೆಸರು ಬರೆಯಲಾಗಿತ್ತು. ಇದರಿಂದ ಸಹಜವಾಗಿ ಕುಟುಂಬಸ್ಥರು ಸಂತಸಗೊಂಡಿದ್ದರು. ಆದರೆ ಕೇವಲ ಒಂದೇ ಗಂಟೆಯಲ್ಲಿ ಈ ಮಗು ಸಬೀನಾಳದ್ದಲ್ಲ, ಅದು ಕಾವ್ಯಾ ಎಂಬುವರಿಗೆ ಜನಿಸಿದ್ದು ಎಂದು ಹೇಳಿ ಸಿಬ್ಬಂದಿ ಕೊಂಡೊಯ್ದಿದ್ದರು. ಇದು ಸಬೀನಾ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ನಮ್ಮ ಮಗು ಯಾವುದು ಎನ್ನುವುದನ್ನು ವೈದ್ಯರೇ ತೀರ್ಮಾನ ಮಾಡಲಿ. ಮೊದಲು ಗಂಡು ಮಗು ಎಂದು ಹೇಳಿ, ಈಗ ಹೆಣ್ಣು ಮಗು ಎಂದು ಹೇಳುತ್ತಿರುವುದು ಸರಿಯಿಲ್ಲ. ಹೆರಿಗೆ ವಾರ್ಡ್‌ನಲ್ಲಿ ಸಿಬ್ಬಂದಿ ತಪ್ಪಿನಿಂದ ಗಂಡು ಮತ್ತು ಹೆಣ್ಣು ಮಗು ಎನ್ನುವ ಗೊಂದಲ ಸೃಷ್ಟಿ ಮಾಡಿದ್ದಾರೆಂದು ಸಬೀನಾ ಪತಿ ಮತ್ತು ಅವರ ತಾಯಿ ಆರೋಪ ಮಾಡಿದ್ದರು. ಮಗು ಅದಲು-ಬದಲು ಸುದ್ದಿ ತಿಳಿಯುತ್ತಿದ್ದಂತೆ ಹೆರಿಗೆ ವಾರ್ಡ್ ಮುಂದೆ ಜನರು ಜಮಾಯಿಸಿದ್ದರು.

ಕೈಗೆ ಹಾಕಿದ್ದ ಟ್ಯಾಗ್ ಅವಾಂತರಕ್ಕೆ ಕಾರಣ
ನವಜಾತ ಶಿಶುವಿಗೆ ಕೈಗೆ ಹಾಕಿದ್ದ ಟ್ಯಾಗ್ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬುದು ವಿಶೇಷ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಹುಟ್ಟಿದ ನವಜಾತ ಶಿಶುವಿನ ಕೈಗೆ ಟ್ಯಾಗ್ ತಪ್ಪಾಗಿ ಹಾಕಿದ್ದರಿಂದ ಈ ಗಂಡು ಮತ್ತು ಹೆಣ್ಣು ಮಗುವಿನ ಗೊಂದಲ ಶುರುವಾಗಿತ್ತು. ಕಾವ್ಯಾ ಎಂಬುವರಿಗೆ ಗಂಡು ಮಗು ಜನಿಸಿತ್ತು. ಆ ಮಗುವಿನ ಕೈಗೆ ಕಾವ್ಯಾ ಹೆಸರು ಬರೆಯುವ ಬದಲು ಸಿಬ್ಬಂದಿ ಸಬೀನಾ ಎಂದು ಬರೆದಿದ್ದರು. ಅದರ ಬಳಿಕ ಮಗುವಿನ ತಂದೆ ಮತ್ತು ಸಂಬಂಧಿಗೆ ಗಂಡು ಮಗುವನ್ನು ತೋರಿಸಿದ್ದರು. ಸ್ವಲ್ಪ ಹೊತ್ತು ಆದ ಬಳಿಕ ಕಾವ್ಯಾಗೆ ಹೆಣ್ಣು ಮಗು ಕೊಟ್ಟಿದ್ದರು. ನನಗೆ ಗಂಡು ಮಗು ಜನಿಸಿದ್ದು ಹೆಣ್ಣು ಮಗು ಯಾಕೆ ಎಂದು ಪ್ರಶ್ನಿಸಿದ್ದರು. ಇದರಿಂದ ಗಲಿಬಿಲಿಯಾದ ಸಿಬ್ಬಂದಿ ಗಂಡು ಮಗು ಹುಡುಕಾಡಿದ್ದಾರೆ. ಆ ಅದಲು ಬದಲಾಗಿರುವುದು ಅರಿವಿಗೆ ಬಂದಿದೆ.

ಸತ್ಯ ಒಪ್ಪಿಕೊಂಡ ಬಾಣಂತಿಯರು
ಗಂಡು ಮಗುವನ್ನು ಸಿಬ್ಬಂದಿ ಹಿಂಪಡೆದ ಬಳಿಕ ಆಸ್ಪತ್ರೆಯ ಹೊರಗೆ ಸಬೀನಾ ಕುಟುಂಬಸ್ತರು ಆಕ್ರೋಶ ಹೊರಹಾಕಿದ್ದರು. ಈ ಗಲಾಟೆಯ ಬಳಿಕ ಎಚ್ಚೆತ್ತ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅಧಿಕಾರಿಗಳು, ಹೆರಿಗೆ ಆದ ಬಳಿಕ ಇಬ್ಬರು ಬಾಣಂತಿಯರಿಗೆ ಅವರಿಗೆ ಆಗಿರುವ ಮಗುವನ್ನು ತೋರಿಸಿದ್ದಾರೆ. ಕಾವ್ಯಾಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗು ಎನ್ನುವ ಮಾಹಿತಿ ನೀಡಿದ್ದರು. ಹೆರಿಗೆ ಆದ ಬಳಿಕ ಅಸ್ವಸ್ಥಗೊಂಡಿರುವ ಬಾಣಂತಿಯರು ಚೇತರಿಸಿಕೊಳ್ಳುತ್ತಿದ್ದರು. ಸಬೀನಾ ಪಾಲಕರು ಗಂಡು ಮಗು ಎಂದು ಪಟ್ಟು ಹಿಡಿದಿದ್ದರು. ಬಳಿಕ ಇಬ್ಬರು ತಾಯಂದಿರಿಗೆ ವಾಸ್ತವ ಸಂಗತಿ ತಿಳಿಸಿದ್ದಾರೆ. ಇಬ್ಬರು ಬಾಣಂತಿಯರು ತಮಗೆ ಆಗಿರುವ ಮಗುವನ್ನು ಈಗ ಸ್ವೀಕರಿಸಿದ್ದಾರೆ. ಕಾವ್ಯಾಗೆ ಗಂಡು ಮತ್ತು ಸಬೀನಾಗೆ ಹೆಣ್ಣು ಮಗುವನ್ನು ವೈದ್ಯರು ನೀಡಿದ್ದಾರೆ. ಕೊನೆಗೂ ತಾಯಿಂದಿರು ತಮಗೆ ಆಗಿರುವ ಮಗುವಿನ ಸತ್ಯ ಹೇಳಿದ್ದರಿಂದ ವಿವಾದಕ್ಕೆ ತೆರೆ ಬಿದ್ದಿದೆ.

ಹೆರಿಗೆ ವಾರ್ಡ್‌ನ ಸಿಬ್ಬಂದಿ ನಿರ್ಲಕ್ಷೃದಿಂದ ಗಂಡು-ಹೆಣ್ಣು ಶಿಶುಗಳು ಅದಲು ಬದಲಾಗಿದ್ದವು. ಟ್ಯಾಗ್ ಹಾಕುವಾಗ ತಾಯಿ ಹೆಸರು ಬದಲಾಗಿದ್ದೆ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ. ಇಬ್ಬರು ತಾಯಂದಿರು ತಮಗೆ ಆಗಿರುವ ಮಗುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಬೀನಾಗೆ ಹೆಣ್ಣು ಮಗು, ಕಾವ್ಯಾಗೆ ಗಂಡು ಮಗು ಹಸ್ತಾಂತರ ಮಾಡಿದ್ದೇವೆ.ಡಾ. ಸಿದ್ದನಗೌಡ ಪಾಟೀಲ, ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net