

ಬೆಂಗಳೂರು: ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ಸೂಕ್ತ ತೀರ್ಮಾನವನ್ನು ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು CM ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರವಾದ ಹಿನ್ನೆಲೆ ವಿಧಾನಸೌಧದಲ್ಲಿ ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈ ಮುಖಂಡರೊಂದಿಗೆ ಮಧ್ಯಾಹ್ನ 1ಕ್ಕೆ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ, ಪ್ರಧಾನಮಂತ್ರಿಗೆ ಪತ್ರ ಬರೆದು ಭೇಟಿಗೆ ಕಾಲಾವಕಾಶ ಕೇಳಿ ಚರ್ಚೆ ಮಾಡಲಾಗುವುದು. ಅಲ್ಲದೆ, ಅವಕಾಶ ಕೊಟ್ಟರೆ ರೈತರ ಸಮಸ್ಯೆ ಚರ್ಚೆ ಮಾಡಿ 3,500 ರೂ ಬೇಡಿಕೆ ಈಡೇರಿಸಲು ಕೋರುತ್ತೇವೆ ಎಂದರು. ಅಲ್ಲದೆ,ಕೂಡಲೇ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಮುಖ್ಯವಾಗಿ ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ.ಆರ್.ಪಿ. ದರ ಪರಿಷ್ಕರಿಸುವುದು, ಸಕ್ಕರೆ ರಫ್ತು, ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಒತ್ತಾಯಿಸುವಂತೆ ಚರ್ಚಿಸಲಾಯಿತು ಎಂದರು.
ಜಿಲ್ಲಾಧಿಕಾರಿಗಳ ಮೂಲಕ 11.25 ರಿಕವರಿ, ಸಾಗಣೆ ಮತ್ತು ವೆಚ್ಚ ಹೊರತುಪಡಿಸಿ 3,200 ರೂ., 10.25 ರಿಕವರಿಗೆ 3,100 ರೂ ಕೊಡುತ್ತೇವೆ ಎಂದು ರೈತರಿಗೆ ಸಂದೇಶ ತಲುಪಿಸಿದ್ದೇವೆ. ಆದರೆ, ರೈತರು ಒಪ್ಪದ ಕಾರಣಕ್ಕೆ ಮಾತುಕತೆಗೆ ಆಹ್ವಾನಿಸಿದ್ದೇವೆ. ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಹೋರಾಟ, ಸಚಿವರ ಭೇಟಿ ಹಾಗೂ ಮಾತುಕತೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಲಿದೆ ಎಂದರು.