ನೂತನ ಪಿಂಚಣಿ ವ್ಯವಸ್ಥೆ ರದ್ದು: ವ್ಯವಸ್ಥೆ ಬದಲು ಚರ್ಚೆಗೆ ಸಭೆ

Pension
Pension
Published on

ಬೆಂಗಳೂರು: ನೂತನ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿ ಕುರಿತಂತೆ ವಿಧಾನಪರಿಷತ್ ಸದಸ್ಯರು ಹಾಗೂ ಪಿಂಚಣಿ ವ್ಯವಸ್ಥೆ ಕುರಿತು ವರದಿ ನೀಡಲು ರಚಿಸಲಾಗಿರುವ ಸಮಿತಿ ಸದಸ್ಯರ ಉಪಸ್ಥಿತಿಯಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುವುದು ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ವಿಧಾನಪರಿಷತ್​ನಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಮಾತನಾಡಿದ ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ, ನೂತನ ಪಿಂಚಣಿ ವ್ಯವಸ್ಥೆಯಿಂದಾಗಿ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಭದ್ರತೆಯೇ ಇಲ್ಲದಂತಾಗಿದೆ. ಹಿಂದಿನ ವ್ಯವಸ್ಥೆಯಲ್ಲಿ ಪಿಂಚಣಿ ಮೊತ್ತ ನಿಗದಿಯಾಗಿತ್ತು. ಆದರೀಗ, ಅದು ಎಷ್ಟು ಬರಲಿದೆ ಎಂಬುದೇ ತಿಳಿಯುತ್ತಿಲ್ಲ. ಕೆಲ ಸಂಸ್ಥೆಗಳು ನೌಕರರ ಪಿಂಚಣಿ ವ್ಯವಸ್ಥೆಗೆ ನೀಡಬೇಕಾದ ಮೊತ್ತವನ್ನು ಕೊಡುತ್ತಿಲ್ಲ. ಹೀಗಾಗಿ ಸಮರ್ಪಕ ಪಿಂಚಣಿ ಬರದಂತಾಗಿದೆ. ಹೀಗಾಗಿ ನೂತನ ಪಿಂಚಣಿ ವ್ಯವಸ್ಥೆ ಬದಲಿಗೆ ಹಳೆಯ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇವರ ಮಾತಿಗೆ ಬಿಜೆಪಿಯ ಆಯನೂರು ಮಂಜುನಾಥ್ ಧ್ವನಿಗೂಡಿಸಿದರು. ಇದಕ್ಕುತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ಇವೆಲ್ಲ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರತ್ತೇನೆ. ಅಲ್ಲದೆ, ಪಿಂಚಣಿ ವ್ಯವಸ್ಥೆಯಲ್ಲಿನ ಗೊಂದಲ ನಿವಾರಣೆಗೆ ಸಮಿತಿ ರಚಿಸಲಾಗಿದೆ. ಸಮಿತಿಯು ಇನ್ನೂ ವರದಿ ನೀಡಿಲ್ಲ. ವರದಿ ಬಂದ ನಂತರ ಪಿಂಚಣಿ ವ್ಯವಸ್ಥೆಯಲ್ಲಿ ಸಮರ್ಪಕ ಬದಲಾವಣೆ ತರಲು ಸಾಧ್ಯ. ಆದರೂ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸರಕು ವಾಹನಗಳಲ್ಲಿ ಜನ ಸಾಗಣೆ ನಿಷೇಧ: ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಸಾರಿಗೆ ಹಾಗೂ ಗೃಹ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್​ನ ಆರ್.ಪ್ರಸನ್ನಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಮ್ಯಾಕ್ಸಿ ಕ್ಯಾಬ್ ಹಾಗೂ ಇತರ ವಾಹನಗಳಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚಿನ ಮಂದಿ ಕರೆದೊಯ್ಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸುವ ವಾಹನಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಜತೆಗೆ 12 ಪ್ಲಸ್ 1 ಆಸನ ಸಾಮರ್ಥ್ಯದ ಮ್ಯಾಕ್ಸಿಕ್ಯಾಬ್​ಗಳಲ್ಲಿ ಹೆಚ್ಚುವರಿ ಆಸನ ಅಳಡಿಸಿಕೊಂಡಿದ್ದರೆ ಅಥವಾ ಅಳವಡಿಸಿಕೊಳ್ಳಲು ಇಚ್ಛಿಸಿದರೆ ನೋಂದಣಿ ಪ್ರಮಾಣ ಪತ್ರದಲ್ಲಿ ಹೆಚ್ಚುವರಿ ಆಸನಗಳ ಸಂಖ್ಯೆ ನಮೂದಿಸಿ ಹೊಸ ನೋಂದಣಿ ಪತ್ರ ನೀಡಲು ನೋಂದಣಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ. ವಾಹನ ಚಕ್ರದ ಅಳತೆ ಆಧರಿಸಿ 16 ಪ್ಲಸ್ 1ರಿಂದ 20 ಪ್ಲಸ್ 1 ಆಸನದವರೆಗೆ ಮಾರ್ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net