'ಕರೊನಾ ಕುದುರೆ' ಏರಿ ಹೊರಟ ಈ ಪೊಲೀಸ್ ಅಧಿಕಾರಿಯ ಮಾತನ್ನು ಕೇಳಿಬಿಡಿ...ಇಲ್ಲದಿದ್ದರೆ ವೈರಸ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !

Corona Horse
Published on

ಕರ್ನೂಲ್​: ಇಡೀ ಜಗತ್ತಿನ ವಿರುದ್ಧ ಯುದ್ಧ ಸಾರಿರುವ ಮಹಾಮಾರಿ ಕರೊನಾ ವೈರಸ್​ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಆಯಾ ರಾಷ್ಟ್ರಗಳ ಸರ್ಕಾರಗಳು ಮಾಡುತ್ತಿವೆ.

ಭಾರತದಲ್ಲೂ ಸಹ ಕರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೇ ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿವೆ.

ಇನ್ನು ಲಾಕ್​ಡೌನ್ ಸಂದರ್ಭದಲ್ಲಿ ರಸ್ತೆರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೂ ಕೂಡ ತಮ್ಮ ಕೈಲಾದ ಮಟ್ಟಿಗೆ, ವಿಭಿನ್ನವಾಗಿ ಕರೊನಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಅದರಲ್ಲೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ಯಾಪಿಲಿ ಪಟ್ಟಣದಲ್ಲಿ ಪೊಲ್​ ಸಬ್​ ಇನ್ಸ್​ಪೆಕ್ಟರ್​ ಮಾರುತಿ ಶಂಕರ್​ ಎಂಬುವರು ಕುದುರೆ ಮೇಲೆ ಸಂಚರಿಸುತ್ತ ಜನರಿಗೆ ಕರೊನಾ ಬಗ್ಗೆ ಹೇಳುತ್ತಿದ್ದಾರೆ.

ಅದರಲ್ಲೇನು ವಿಶೇಷ ಎಂದು ಕೇಳಬೇಡಿ. ಕುದುರೆಯ ದೇಹದ ಮೇಲೆ ಬರೆಯಲಾದ ಚಿತ್ರ ಎಲ್ಲರ ಗಮನಸೆಳೆದಿದೆ. ವಿಡಿಯೋ, ಫೋಟೋಗಳು ವೈರಲ್​ ಆಗುತ್ತಿವೆ. ಬಿಳಿ ಬಣ್ಣದ ಕುದುರೆಯ ಮೈಮೇಲೆ ಕೆಂಪು ಬಣ್ಣದಲ್ಲಿ ವೈರಸ್​ ಮಾದರಿಯನ್ನು ಚಿತ್ರಿಸಲಾಗಿದೆ. ಮೈತುಂಬ ವೈರಸ್​ ಚಿತ್ರವನ್ನು ಹೊಂದಿದ ಕುದುರೆ ಮೇಲೆ ಕುಳಿತ ಪೊಲೀಸ್ ಅಧಿಕಾರಿ ಬೀದಿಯಲ್ಲಿ, ಸಣ್ಣ ಕಾಲನಿಗಳ ರಸ್ತೆಯಲ್ಲಿ, ಪಟ್ಟಣಗಳಲ್ಲಿ ಸಂಚರಿಸುತ್ತ ಜಾಗೃತಿ ಮೂಡಿಸುತ್ತಿದ್ದಾರೆ.

ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಕೈ ತೊಳೆಯಿರಿ. ಲಾಕ್​ಡೌನ್​ ಇರುವ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ಪೊಲೀಸ್​ ಅಧಿಕಾರಿಯ ಈ ಕ್ರಮ ತುಂಬ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಕೆಂಪು ಬಣ್ಣದ ಕರೊನಾ ವೈರಸ್​ ಚಿತ್ರಗಳನ್ನು ಹೊಂದಿರುವ ಈ ಕುದುರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ, ಮನೆಮನೆಗೂ ಕರೊನಾ ಬರುತ್ತಿದೆ, ಜಾಗೃತರಾಗಿರಿ ಎಂಬ ಸಂದೇಶ ಸಾರುವಂತೆ ಭಾಸವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸ್​ ಅಧಿಕಾರಿಯೋರ್ವ ಕರೊನಾ ಹೆಲ್ಮೆಟ್ ಧರಿಸಿ, ರಸ್ತೆಯಲ್ಲಿ ಬರುವ ವಾಹನಸವಾರರಿಗೆ ಎಚ್ಚರಿಕೆ ನೀಡುತ್ತಿರುವ ಫೋಟೋ ವೈರಲ್​ ಆಗಿತ್ತು. ಈ ಹೆಲ್ಮೆಟ್​ನ್ನು ಗೌತಮ್​ ಎಂಬುವರು ಡಿಸೈನ್ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net