

ನವದೆಹಲಿ: ಸ್ನೇಹಿತರ ಜತೆ ಮದ್ಯದ ಪಾರ್ಟಿಗೆ ಹೋಗಿದ್ದ ಯುವಕನೊಬ್ಬ, ತನ್ನ ಸಹೋದರಿಯ ಬಗ್ಗೆ ಸ್ನೇಹಿತರು ಕೆಟ್ಟದಾಗಿ ಮಾತನಾಡಿದ್ದನ್ನು ಆಕ್ಷೇಪಿಸಿ ಕೊಲೆಯಾಗಿದ್ದಾನೆ. ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕೊಳವೆಬಾವಿಯೊಂದರ ಒಳಗೆ ಎಸೆದಿರುವುದಾಗಿ ಆರೋಪಿಗಳು ಹೇಳಿರುವ ಹಿನ್ನೆಲೆಯಲ್ಲಿ ಶವದ ಭಾಗಗಳನ್ನು ಸಂಗ್ರಹಿಸಲು ಪೊಲೀಸರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಬೋರ್ವೆಲ್ ಸುತ್ತ ಅಗೆಯುತ್ತಿದ್ದಾರೆ. ಮೂರು ದಿನಗಳಿಂದ 50 ಅಡಿ ಆಳ ಅಗೆದರೂ ಶವ ಭಾಗಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಜೂ.25ರಂದು ರೂಪಕ್ ಎಂಬ ಯುವಕ ಮೇರಠ್ನಲ್ಲಿ ಕಾಣೆಯಾಗಿದ್ದ. ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡಲೆಂದು ಹೋಗಿದ್ದ ಆತ ಮರುದಿನ ಬೆಳಗ್ಗೆಯಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಆತನ ಮನೆಯವರು ವ್ಯಕ್ತಿ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಜತೆಗೆ ಅಂದು ಆತನನ್ನು ಕರೆದೊಯ್ದ ಸ್ನೇಹಿತರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ವಿಕಾಸ್ ಎಂಬಾತ ಸೇರಿ ಅಂದು ರೂಪಕ್ನನ್ನು ಕರೆದೊಯ್ದಿದ್ದ ಎಲ್ಲ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದರು.
ವಿಚಾರಣೆಗೆ ಒಳಪಡಿಸಿದಾಗ ನಾಲ್ವರು ಕೂಡ, ಮದ್ಯದ ಅಮಲಿನಲ್ಲಿ ರೂಪಕ್ನ ಸಹೋದರಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ ರೂಪಕ್ ಕುಪಿತನಾದ. ಜತೆಗೆ ನಮ್ಮೆಲ್ಲರ ಮೇಲೆ ಹಲ್ಲೆ ಮಾಡಲು ಮುಂದಾದ. ಆಗ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ಮೊದಲಿಗೆ ರೂಪಕ್ನ ದೇಹವನ್ನು ಇಟ್ಟಿಗೆ ಭಟ್ಟಿಯೊಂದರಲ್ಲಿ ಹೂಳಿದ್ದರು. ಆದರೆ, ಸಿಕ್ಕಿಬೀಳುವ ಭೀತಿಯಲ್ಲಿ ಶವವನ್ನು ಹೊರತೆಗೆದೆರು. ಬಳಿಕ ವಿಕಾಸ್ ಅದನ್ನು ತುಂಡು ತುಂಡಾಗಿ ಕತ್ತರಿಸಿದ. ತುಂಡಾದ ಶವದ ಭಾಗಗಳನ್ನು ಕೊಂಡೊಯ್ದು ಬೋರ್ವೆಲ್ನಲ್ಲಿ ವಿಸರ್ಜಿಸಿದ್ದಾಗಿ ನಾಲ್ವರು ಸ್ನೇಹಿತರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಶವದ ತುಂಡುಗಳು ಮತ್ತು ಕೊಲೆ ಮಾಡಲು ಬಳಸಿರಬಹುದಾದ ಆಯುಧವನ್ನು ಪತ್ತೆ ಮಾಡಲು ಆರೋಪಿಗಳು ತೋರಿಸಿರುವ ಬೋರ್ವೆಲ್ ಸುತ್ತ ಅಗೆಯುತ್ತಿದ್ದಾರೆ. ಅಗೆಯುವಾಗ ಉಂಟಾಗುವ ಕಂಪನದಿಂದ ಶವದ ತುಂಡುಗಳು ಮತ್ತಷ್ಟು ಆಳಕ್ಕೆ ಹೋಗುವ ಭಯದಲ್ಲಿ ಪೊಲೀಸರು ಮತ್ತು ಮೇರಠ್ನ ಸ್ಥಳೀಯ ಆಡಳಿತ ಸಂಸ್ಥೆ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಬೋರ್ವೆಲ್ ಸುತ್ತ ಅಗೆಯುತ್ತಿದ್ದಾರೆ ಎನ್ನಲಾಗಿದೆ. ಶವದ ತುಂಡುಗಳು ಸಿಗದೇ ಹೋಗಿರುವುದರಿಂದ, ಸದ್ಯಕ್ಕೆ ನಾಲ್ವರನ್ನು ತಮ್ಮ ವಶದಲ್ಲೇ ಇರಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.