ಕ್ಯಾನ್ಸರ್​ ಪೀಡಿತ 8 ವರ್ಷದ ಮಗುವಿಗೆ ಸಕಾಲದಲ್ಲಿ ಔಷಧ ತಲುಪಿಸಿ ಮಾನವೀಯತೆ ಮೆರೆದ ಭಾರತೀಯ ಪೋಸ್ಟ್​

india post
Published on

ನವದೆಹಲಿ: ಭಾರತೀಯ ಅಂಚೆ ಸೇವೆಗಳು ಮೊದಲಿನಿಂದಲೂ ದೇಶದ ಜೀವನಾಡಿಯಾಗಿದೆ. ಅಂಚೆಯಣ್ಣ ಸೇವೆ ಇಲ್ಲದ ದಿನಗಳನ್ನು ಊಹಿಸಲೂ ಸಾಧ್ಯವಿಲ್ಲ. ಹೀಗಿದ್ದೂ ಆಧುನಿಕತೆಯ ಈ ಕಾಲಘಟ್ಟದಲ್ಲಿ ಅಂಚೆ ಸೇವೆಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, ಅಗತ್ಯದ ಸಂದರ್ಭದಲ್ಲಿ ಈ ಸೇವೆ ಜೀವನಾಡಿ ಎಂಬ ಪದಕ್ಕೆ ನಿಜಕ್ಕೂ ಅನ್ವರ್ಥಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಅದು 8 ವರ್ಷದ ಮಗು. ಕ್ಯಾನ್ಸರ್​ನಿಂದ ಬಳಲುತ್ತಿದೆ. ಈ ಮಗು ಇರುವುದು ಹಿಮಾಚಲ ಪ್ರದೇಶದ ಉನಾದಲ್ಲಿ. ಕ್ಯಾನ್ಸರ್​ ಚಿಕಿತ್ಸೆಗೆ ಅಗತ್ಯವಾದ ಔಷಧ ಮುಗಿದು ಹೋಗಿತ್ತು. ಲಾಕ್​ಡೌನ್​ ಅವಧಿಯಲ್ಲಿ ಈ ಔಷಧವನ್ನು ದೆಹಲಿಯಿಂದ ತರಿಸಬೇಕಿತ್ತು.

ಅದಕ್ಕಾಗಿ ಮಗುವಿನ ತಾಯಿ ಶಾಲಿನಿ ಅವರು ದೆಹಲಿಯಲ್ಲಿದ್ದ ಸ್ನೇಹಿತೆಯನ್ನು ಸಂಪರ್ಕಿಸಿದರು. ಔಷಧವೇನೋ ಸಿಕ್ಕಿತು. ಆದರೆ ಲಾಕ್​ಡೌನ್​ನಿಂದಾಗಿ ಕೊರಿಯರ್​ ಸೇವೆ ಲಭ್ಯವಿರಲಿಲ್ಲ. ಹಾಗಾಗಿ ಅಂಚೆ ಸೇವೆಗಳನ್ನು ಬಳಸುವುದು ಅನಿವಾರ್ಯವಾಗಿತ್ತು. ಆದರೆ, ಲಾಕ್​ಡೌನ್​ ಈ ಸೇವೆಯನ್ನು ಬಾಧಿಸುತ್ತಿದುದರಿಂದ ಮುಂದೇನು ಎಂಬ ಪ್ರಶ್ನೆ ಎದುರಾಯಿತು.

ತಕ್ಷಣವೇ ಶಾಲಿನಿ ಅವರ ಸ್ನೇಹಿತೆ ಕೇಂದ್ರ ಸಂಪರ್ಕ ಸಚಿವ ರವಿಶಂಕರ್​ ಪ್ರಸಾದ್​ ಅವರನ್ನು ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು. ಮಗುವಿನ ಪರಿಸ್ಥಿತಿ ಅರ್ಥ ಮಾಡಿಕೊಂಡ ರವಿಶಂಕರ್​ ಪ್ರಸಾದ್​, ಹೇಗಾದರೂ ಮಾಡಿ ಔಷಧವನ್ನು ಸಕಾಲದಲ್ಲಿ ಹಿಮಾಚಲಪ್ರದೇಶದ ವಿಳಾಸಕ್ಕೆ ತಲುಪಿಸುವಂತೆ ಅಂಚೆ ಇಲಾಖೆಗೆ ಸೂಚಿಸಿದರು.

ಅದರಂತೆ ದೆಹಲಿ, ಹರಿಯಾಣ, ಪಂಜಾಬ್​ ಮತ್ತು ಹಿಮಾಚಲ ಪ್ರದೇಶ ಅಂಚೆ ವೃತ್ತದ ಅಧಿಕಾರಿಗಳು ಒಟ್ಟಾಗಿ ಔಷಧದ ರವಾನೆಗೆ ತಂತ್ರಗಾರಿಕೆ ರೂಪಿಸಿದರು. ಆಯಾ ವೃತ್ತದ ಅಂಚೆ ವಾಹನಗಳ ನೆರವಿನಿಂದ ಔಷಧವನ್ನು ರವಾನಿಸಲಾಯಿತು. ಕೊನೆಯ ಘಟ್ಟದಲ್ಲಿ ಪಂಜಾಬ್​ ವೃತ್ತದ ಅಂಚೆ ವಾಹನದಲ್ಲಿ ಏಪ್ರಿಲ್​ 19ರ ಬೆಳಗ್ಗೆ ಉನಾದಲ್ಲಿರುವ ಮಗುವಿನ ಮನೆ ಬಾಗಿಲಿಗೇ ಔಷಧವನ್ನು ತಲುಪಿಸಲಾಯಿತು.

ತಮ್ಮ ಪುತ್ರನಿಗೆ ಅಗತ್ಯವಾದ ಔಷಧವನ್ನು ಸಕಾಲದಲ್ಲಿ ತಲುಪಿಸಿದ್ದಕ್ಕಾಗಿ ಶಾಲಿನಿ ಅಂಚೆ ಇಲಾಖೆಗೆ ಕೃತಜ್ಞತೆ ಅರ್ಪಿಸಿದ್ದಾರೆ. ತಮ್ಮ ಸೂಚನೆಯ ಮೇರೆಗೆ ಔಷಧ ತಲುಪಿಸಿ ಮಾನವೀಯತೆ ಮೆರೆದಿದ್ದಕ್ಕಾಗಿ ಸಚಿವ ರವಿಶಂಕರ್​ ಪ್ರಸಾದ್​ ಅವರು ಇಲಾಖೆಗೆ ಧನ್ಯವಾದ ಹೇಳಿದ್ದಲ್ಲದೆ, ಔಷಧ ತಲುಪಿಸಲು ಶ್ರಮಿಸಿದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಸಂಕಷ್ಟದ ಸಂದರ್ಭದಲ್ಲಿ ಇಲಾಖೆಯ ಶುಲ್ಕರಹಿತ ಸಂಖ್ಯೆ 1800 266 6868 ಸಂಖ್ಯೆ ಸಂಪರ್ಕಿಸಿ ಸೇವೆ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net