

ವಜ್ರವಷ್ಟೇ ಅಲ್ಲ, ರತ್ನಗಳೆಲ್ಲವೂ ಆರೋಗ್ಯದ ದೃಷ್ಟಿಯಿಂದ ಅಮೂಲ್ಯವಾದವು. ‘ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ’ ಎಂಬ ಗಾದೆಯ ಮಾತಿನಲ್ಲೂ ರತ್ನಗಳ ಗುಣಗಾನ ಬಿಂಬಿತವಾಗಿದೆ. ವಜ್ರದ ನಂತರದ ರತ್ನವಾದ, ಸಾಮಾನ್ಯವಾಗಿ ಜನರೆನ್ನುವ ರೂಬಿಯೇ ಮಾಣಿಕ್ಯ. ಇದರ ಭಸ್ಮವು ಹೃದಯಕ್ಕೆ ಬಲಪ್ರದಾಯಕ. ದೈಹಿಕ, ಲೈಂಗಿಕ ಬಲವನ್ನೂ ಹೆಚ್ಚಿಸುವುದು. ಮಸ್ತಿಷ್ಕದ ರೋಗ, ಮಾನಸಿಕ ಕಾಯಿಲೆಗಳಲ್ಲಿ ಉಪಕಾರಿ. ರೋಗನಿರೋಧಕ ಶಕ್ತಿ ವರ್ಧಿಸುವ ಉತ್ತಮ ರಸಾಯನ. ವಾತ, ಪಿತ್ತ ಕಡಿಮೆಗೊಳಿಸಿ ಹಸಿವು ಹೆಚ್ಚಿಸಿ ಜೀರ್ಣಕ್ರಿಯೆ ಸುಲಭಗೊಳಿಸುವುದು.
ಮೂರನೆಯ ರತ್ನ ನೀಲಕ್ಕೆ ಇಂದ್ರನೀಲವೆಂಬ ಹೆಸರೂ ಇದೆ. ಸಫಯರ್ ಎಂಬುದು ಸಾಮಾನ್ಯ ಹೆಸರು. ಮನಸ್ಸಿನ ಶಾಂತತೆಗೆ ಅನುವು ಮಾಡುತ್ತದೆ. ಮಿದುಳು, ಹೃದಯಗಳಿಗೆ ಬಲ ನೀಡುವುದು ಮಾತ್ರವಲ್ಲದೆ ಮಾನಸಿಕ ಒತ್ತಡದಿಂದಾಗುವ ತೀವ್ರವಾದ ಎದೆಬಡಿತವನ್ನೂ ನಿಯಂತ್ರಣಕ್ಕೆ ತರಬಲ್ಲದು.
ನಾಲ್ಕನೆಯದಾದ ಪುಷ್ಪರಾಜಕ್ಕೆ ಟೋಪಾಜ್ ಎಂಬುದು ರೂಢನಾಮ. ಹಸಿವು, ಪಚನಶಕ್ತಿ ವರ್ಧಿಸಿ ಅಜೀರ್ಣ, ವಾಂತಿಯನ್ನು ಸರಿಗೊಳಿಸುತ್ತದೆ. ಕಫ-ವಾತಗಳನ್ನು ಕಡಿಮೆಗೊಳಿಸುವ ಪುಷ್ಪರಾಜದ ಭಸ್ಮವು ಮೈ ಉರಿ ಶಮನಗೊಳಿಸುವುದು. ವಿಷಹರವಾಗಿದ್ದು ಚರ್ಮರೋಗಗಳ ಚಿಕಿತ್ಸೆಯಲ್ಲೂ ಬಳಕೆಯಾಗುತ್ತದೆ.
ಐದನೆಯದಾದ ಮರಕತಕ್ಕೆ ಎಮರಾಲ್ಡ್ ಎಂಬ ಹೆಸರಿದೆ. ಜ್ವರ, ವಾಂತಿ, ಅಸ್ತಮಾ, ರಕ್ತಹೀನತೆ, ಮೈಊತ, ವಿಷಗಳನ್ನೆಲ್ಲ ಗುಣಪಡಿಸುವ ಇದರ ಭಸ್ಮವು ಶರೀರದಲ್ಲಿರುವ ಏಳೂ ಧಾತುಗಳ ಸಾರರೂಪವಾದ, ರೋಗ ಬರದಂತೆ ತಡೆಯಲು ಶರೀರದಲ್ಲಿರುವ ಓಜಸ್ಸನ್ನು ವರ್ಧಿಸುವ ಗುಣದಿಂದ ಸಂಪನ್ನವಾಗಿದೆ.
ಆರನೆಯ ರತ್ನ ಚಿರಪರಿಚಿತವಾಗಿರುವ ವೈಡೂರ್ಯವಾಗಿದೆ. ಕ್ಯಾಟ್ಸ್ ಐ ಎಂಬ ನಾಮಾಂಕಿತವಾಗಿದೆ. ರಕ್ತ ಹಾಗೂ ಪಿತ್ತಗಳಿಗೆ ಸಂಬಂಧಿಸಿದ ರೋಗಗಳಲ್ಲಿ ಉಪಯೋಗಿಸಲ್ಪಡುವ ವೈಡೂರ್ಯಭಸ್ಮವು ಹಸಿವು, ಜೀರ್ಣಶಕ್ತಿ, ಶರೀರಬಲಗಳನ್ನು ಹೆಚ್ಚಿಸುವುದಲ್ಲದೆ ದೀರ್ಘವಾದ ಆಯುಷ್ಯಕ್ಕೆ ಅನುಕೂಲಕಾರಿ.
ಏಳನೆಯದು ಗೋಮೇಧಿಕ ಅರ್ಥಾತ್ ಸಿನ್ನಮೊನ್ ಸ್ಟೋನ್. ಇದರ ಭಸ್ಮವು ರುಚಿಕಾರಕ. ಹಸಿವು ಜರಣಶಕ್ತಿ, ಬುದ್ಧಿಶಕ್ತಿಗಳ ವರ್ಧಕ. ಚರ್ಮಕ್ಕೆ ಹಿತಕಾರಿ. ರಕ್ತಹೀನತೆ, ಕಫ, ಪಿತ್ತ ರೋಗಗಳ ಚಿಕಿತ್ಸೆಯಲ್ಲಿ ಲಾಭಕಾರಿಯಾಗಿದ್ದು ದೇಹವನ್ನು ದೃಢಗೊಳಿಸುವುದು.
ಎಂಟನೆಯ ರತ್ನವೇ ಶುದ್ಧಸ್ವರೂಪದ ಕ್ಯಾಲ್ಸಿಯಂನ ಆಗರವಾದ, ಜನಪ್ರಿಯವಾದ ಮುತ್ತು. ಇದರ ಮುಕ್ತಾಭಸ್ಮವು ತ್ರಿದೋಷ ನಾಶಕ. ಕಣ್ಣು, ಹೃದಯಗಳಿಗೆ ಶಕ್ತಿ ತುಂಬುವ ಮುತ್ತು ಲೈಂಗಿಕ ಬಲದಾಯಕವೂ ಹೌದು. ರಕ್ತಪಿತ್ತ, ತಲೆನೋವು, ವಿಷಬಾಧೆ, ಮೈಉರಿಗಳನ್ನು ಶಮನಗೊಳಿಸಿ ಎದೆಯಲ್ಲಿರುವ ಕಫ ಹೊರಹಾಕುವುದು. ನೆನಪಿನ ಶಕ್ತಿ ಹೆಚ್ಚಿಸುವ ಗುಣವೂ ಮುತ್ತಿಗಿದೆ.
ಒಂಬತ್ತನೆಯದು ಪ್ರಚಲಿತದಲ್ಲಿರುವ ಹವಳ. ಪ್ರವಾಳಭಸ್ಮವು ತ್ರಿದೋಷ ನಾಶಕ, ಜ್ವರ, ಕಫ, ಉಸಿರಾಟದ ತೊಂದರೆ, ರಕ್ತಸ್ರಾವ, ಆಮ್ಲಪಿತ್ತಗಳನ್ನು ಗುಣಪಡಿಸುವುದು. ಹೃದಯ, ಮಿದುಳು, ಜಠರ, ವೀರ್ಯಗಳಿಗೆ ಶಕ್ತಿತುಂಬಿ ಬಾಯಿರುಚಿ ಉಂಟುಮಾಡಿ ಮೂತ್ರಪ್ರವಾಹವನ್ನು ಸರಿಗೊಳಿಸುವ ಗುಣಧರ್ಮ ಹವಳಕ್ಕಿದೆ.
ಯಾವುದೇ ವ್ಯಕ್ತಿಯ ಬಗ್ಗೆ ಗೌರವ ಭಾವನೆ ಮೂಡಲು ಅವರ ಸದ್ಗುಣಗಳು ತಿಳಿದಿರಬೇಕು. ಅಂತೆಯೇ ರತ್ನಾಭರಣಗಳು. ಈ ನವರತ್ನಗಳ ಬಗ್ಗೆ ತಿಳಿದಾಕ್ಷಣ ಅವನ್ನು ಮನೆಮದ್ದಿನ ರೀತಿ ಪ್ರಯೋಗಿಸಲು ಬರದು. ತಜ್ಞವೈದ್ಯರು ಅಗತ್ಯಕ್ಕೆ ತಕ್ಕಂತೆ ಇವುಗಳ ವಿಭಿನ್ನ ಸಂಯೋಜನೆಯಿಂದ ಔಷಧ ತಯಾರಿಸಿ ಚಿಕಿತ್ಸೆಗೆ ಬಳಕೆ ಮಾಡಬೇಕಾಗುತ್ತದೆ. ಪ್ರಾಚೀನ ವೈದ್ಯವಿಜ್ಞಾನಿಋಷಿಗಳ ಅಖಂಡ ಜ್ಞಾನನಿಧಿಯ ಪರಿಚಯ ನಮಗಿರಬೇಕು. ಆಗ ನಮ್ಮ ದೇಶ, ನಮ್ಮ ಹೆಮ್ಮೆ.
ಪಂಚಸೂತ್ರಗಳು:
ಇಸಬ್ಗೋಲ್: ಕೆಮ್ಮು ನಿಯಂತ್ರಿಸುವುದು.
ಬಟಾಣಿ: ಮೈ ಊತವಿದ್ದಾಗ ಸೇವಿಸಬಾರದು.
ಬಾಳೆಕಾಯಿ ಹೂ: ಮಧುಮೇಹ ನಿಯಂತ್ರಕ.
ಕೆಂಪು ಚಿತ್ರಮೂಲ: ಹಲವು ದಿನಗಳ ಜ್ವರ ಗುಣಕಾರಿ.
ಅಬ್ಳುಕ ಹಣ್ಣು / ಪ್ಲಮ್ ವಾಕರಿಕೆ ಶಮನ