ಕೆಲ ಇಂಜೆಕ್ಷನ್‌ಗಳ ನಿರ್ಭಂಧಕ್ಕೆ ಪತ್ರ ಬರೆದಿದ್ದರೂ ಕೇಂದ್ರ ಪ್ರತಿಕ್ರಿಯಿಸಿಲ್ಲ ಕೋವಿಡ್ ಅಕ್ರಮ ನೋಟೀಸ್‌ಗೂ ಕಂಪನಿಗಳು ಉತ್ತರ ನೀಡಿಲ್ಲ: ಸಚಿವ ದಿನೇಶ್

Dinesh Gundu Rao
Published on

ಬೆಂಗಳೂರು:

ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆದ ಇಂಜೆಕ್ಷನ್‌ಗಳ ನಿರ್ಬಂಧಕ್ಕೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದರೂ, ಈ ತನಕ ಯಾವುದೇ ಉತ್ತರ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಥ ಕಂಪನಿಗಳ ಮೇಲೆ ಪರಿಣಾಮಕಾರಿ ನಿಗಾ ಇಡೋದು ನಮ್ಮ ಕರ್ತವ್ಯ. ರಾಜ್ಯ ಮತ್ತು ಕೇಂದ್ರ ಒಟ್ಟಿಗೆ ಇದರ ಬಗ್ಗೆ ಗಮನ ಕೊಡಬೇಕಿದೆ. ಈ ಬಗ್ಗೆ ಸಚಿವ ಜೆ.ಪಿ. ನಡ್ಡಾ ಅವರು ಇನ್ನೂ ತಮ್ಮ ಪತ್ರಕ್ಕೆ ಉತ್ತರಿಸಿಲ್ಲ ಎಂದರು.

ಅನೇಕ ಕಂಪನಿಗಳು ಗುಣಮಟ್ಟ ಕಾಯ್ದುಕೊಳ್ಳುತ್ತಿವೆ. ಆದರೆ ಕೆಲ ಕಂಪನಿಗಳುಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಆದ್ದರಿಂದ ನಿರ್ಲಕ್ಷ್ಯ ತಾಳಿರುವ ಕಂಪನಿಗಳ ಮೇಲೆ ನಿಗ್ರಹ ಇರಬೇಕು ಎಂದರು.

ಪಶ್ಚಿಮ ಬಂಗಾ ಕಂಪನಿ ಈಗ ಕ್ಲೋಸ್ ಆಗಿದೆ. ಆ ಕಂಪೆನಿ ಐವಿ ದ್ರಾವಣ ತಯಾರಿ ಅಷ್ಟೇ ಅಲ್ಲ, ಅವರೇ ತಯಾರಿಸಿರುವ ಬೇರೆ ಡ್ರಗ್‌ಗಳೂ ವಿಫಲವಾಗಿವೆ. ಆ ಕಂಪನಿ ವಿರುದ್ಧದ ನಮ್ಮ ಕಾನೂನು ಹೋರಾಟ ಮುಂದುವರೆದಿದೆ ಎಂದರು.

ತಾಪಮಾನ ಎದುರಿಸಲು ಸಿದ್ಧತೆ:

ಬೇಸಿಗೆ ನಿಭಾಯಿಸಲು ಸಿದ್ದರಿದ್ದೇವೆ. ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅತ್ಯಗತ್ಯವಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯವಿದ್ದರೆ, ಆಶ್ರಯ ತಾಣಗಳನ್ನು ನಿರ್ಮಿಸಲಾಗುವುದು ಎಂದರು.

ಇನ್ನೂ ಉತ್ತರ ಬಂದಿಲ್ಲ:

ಕೋವಿಡ್ ಅಕ್ರಮ ಕುರಿತು ಹಲವು ಕಂಪನಿಗಳಿಗೆ ನೊಟೀಸ್ ಕೊಡಲಾಗಿದೆ. ಆದರೆ, ಇನ್ನೂ ಆ ಕಂಪನಿಗಳಿಂದ ಉತ್ತರ ಬಂದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸ್ತೇನೆ ಎಂದರು.

ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿದೆ, ಸಿಐಡಿ ತನಿಖೆ ನಡೆಯುತ್ತಿದೆ. ಆದರೆ ಅಕ್ರಮ ಆಗಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಂಪನಿಗಳು ಏನು ಉತ್ತರ ಕೊಡುತ್ತದೆಯೋ ನೋಡಬೇಕು. ಕೋವಿಡ್ ಅಕ್ರಮಗಳಲ್ಲಿ ಏನೇ ಕ್ರಮ ವಹಿಸಿದರೂ ಕಾನೂನು ಪ್ರಕಾರವೇ ಎಚ್ಚರಿಕೆಯಿಂದ ಮಾಡಬೇಕು. ಸದ್ಯ ಮೈಕೆಲ್ ಕುನ್ಹಾ ವರದಿ ಆಧರಿಸಿ ನೊಟೀಸ್ ಕೊಟ್ಟಿದ್ದೇವೆ ಎಂದರು.

ಹೈಕಮಾಂಡ್ ನಿರ್ಧರಿಸಲಿದೆ:

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಒಂದಲ್ಲ ಒಂದು ದಿನ ಆಗಲೇಬೇಕಲ್ಲ, ಇದರಲ್ಲೇನಿದೆ? ಎರಡು, ಮೂರು ವರ್ಷ, ಐದು ವರ್ಷ ಚೇಂಜ್ ಆಗಬೇಕಲ್ವಾ? ಆದರೆ ಯಾವಾಗ ಮಾಡಬೇಕು, ಯಾರನ್ನು ಮಾಡಬೇಕು ಅಂತ ಹೈಕಮಾಂಡ್ ನಿರ್ಧರಿಸಲಿದೆ. ಸತೀಶ್ ಜಾರಕಿಹೊಳಿ ಅವರು ಅಧ್ಯಕ್ಷರ ಬದಲಾವಣೆ ಬಗ್ಗೆ ಹಾಗೇನೂ ಹೇಳಿಲ್ಲ ಎಂದರು.

ರಾಜೀನಾಮೆ ವಿಷಯ ಗೊತ್ತಿಲ್ಲ:

ಗೃಹ ಸಚಿವ ಜಿ.ಪರಮೇಶ್ವರ ಅವರು ರಾಜೀನಾಮೆ ಹೇಳಿಕೆ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಸಚಿವರೂ ಕ್ರಿಯಾಶೀಲತೆ ಮತ್ತು ಉತ್ಸಾಹದಿಂದ, ಬದ್ಧತೆಯಿಂದ ಕೆಲಸ ಮಾಡುತ್ತ್ತಿದ್ದಾರೆ. ಯಾರಿಗೂ ನಿರಾಸಕ್ತಿ ಇಲ್ಲ ಎಂದರು.

ಎಸ್ಕಾಂಗಳಿಂದ ಪತ್ರ ವಿಚಾರ:

ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಜನರಿಂದ ಪಡೆಯಲು ಕೆಇಆರ್‌ಸಿಗೆ ಎಸ್ಕಾಂಗಳು ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಗ್ಯಾರಂಟಿಗಳ ಜಾರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ನಮ್ಮ ಇಲಾಖೆ ಯೋಜನೆಗಳು ಉತ್ತಮವಾಗಿಯೇ ಜಾರಿ ಆಗುತ್ತಿವೆ ಎಂದರು. ಮೈಸೂರು ಜಾಥಾ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷವಾಗಿ ಪ್ರತಿಭಟನೆ ಮಾಡೋದು ಅವರ ಹಕ್ಕು. ಆದರೆ, ಸರ್ಕಾರ ಏನು ಕ್ರಮ ತಗೋಬೇಕೋ ತಗೊಳ್ಳುತ್ತದೆ ಎಂದರು.

ದಲಿತರ ಹಣ ಬಳಕೆ ಸಮರ್ಥನೆ:

ಪರಿಶಿಷ್ಟ ನಿಗಮಗಳ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿರುವ ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಸಚಿವರು, ಗ್ಯಾರಂಟಿ ಯೋಜನೆ ದಲಿತರಿಗೂ, ಹಿಂದುಳಿದವರಿಗೂ ಸೇರಿದಂತೆ ಎಲ್ಲರಿಗೂ ಮುಟ್ಟುತ್ತಿದೆ. ಅಷ್ಟಕ್ಕೂ ಎಸ್‌ಸಿ, ಎಸ್‌ಟಿ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಬಾರದು ಅಂತೇನಿಲ್ಲ. ಆ ಸಮುದಾಯಗಳಿಗೆ ಯೋಜನೆ ಮುಟ್ಟಬೇಕಷ್ಟೆ ಎಂದರು.

ಕಾಲ್ತುಳಿತ ಸುಳ್ಳು:

ಕುಂಭಮೇಳದಲ್ಲಿ ಮತ್ತು ದೆಹಲಿ ರೈಲು ನಿಲ್ದಾಣದಲ್ಲಿ ಎಷ್ಟು ಜನ ಕಾಲುತುಳಿತಕ್ಕೆ ಸತ್ರು? ಇದರಲ್ಲಿ ಬಿಜೆಪಿ ವಾಸ್ತವ ತಿಳಿಸದೆ, ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net