

ಕೊಚ್ಚಿ: ಕರೊನಾ ವೈರಸ್ ಬಂದಾಗಿನಿಂದ ದೇಶದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳ ಬೇಡಿಕೆ ಹೆಚ್ಚಾಗಿದೆ. ಸೋಂಕು ಹರಡುವಿಕೆಯನ್ನು ತಟೆಗಟ್ಟುವ ಸಲುವಾಗಿ ಜನರು ಮಾಸ್ಕ್, ಸ್ಯಾನಿಟೈಸರ್ಗಳನ್ನು ಕೊಳ್ಳಲು ಮೆಡಿಕಲ್ ಶಾಪ್ಗಳಿಗೆ ಮುಗಿಬಿದ್ದಿದ್ದಾರೆ. ಪೂರೈಕೆಗಿಂತ ಬೇಡಿಕೆ ಹೆಚ್ಚಾದ ಕಾರಣ ಮೆಡಿಕಲ್ ಶಾಪ್ಗಳು ಅವುಗಳ ಬೆಲೆಯನ್ನು ಹೆಚ್ಚಿಸಿ ಮಾರಾಟ ಮಾಡಲಾರಂಭಿಸಿವೆ. ಆದರೆ ಇಲ್ಲೊಂದು ಮೆಡಿಕಲ್ ಶಾಪ್ನಲ್ಲಿ ಕೇವಲ 2 ರೂಪಾಯಿಗೆ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಈ ಶಾಪ್ ಪಾತ್ರವಾಗಿದೆ.
ಕೇರಳದ ಕೊಚ್ಚಿಯಲ್ಲಿರುವ ಮೆಡಿಕಲ್ ಶಾಪ್ ಒಂದರಲ್ಲಿ ಮಾಸ್ಕ್ಗಳನ್ನು ಕೇವಲ 2 ರೂಪಾಯಿಗೆ ಮಾರಲಾಗುತ್ತಿದೆ. ಕಳೆದ ಎಂಟು ವರ್ಷಗಳಿಂದ 2 ರೂಪಾಯಿಗೆ ಮಾಸ್ಕ್ ಮಾರಾಟ ಮಾಡಲಾಗುತ್ತಿದ್ದು, ಕರೊನಾ ಹಿನ್ನೆಲೆ ಅದರ ಬೆಲೆಯನ್ನು ಏರಿಕೆ ಮಾಡದೆ ಅದೇ ಬೆಲೆಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ನಾಧೀಮ್. ಮಾಸ್ಕ್ನ್ನು ಕೊಳ್ಳುವಾಗ ಇವರಿಗೆ ಒಂದು ಮಾಸ್ಕ್ಗೆ 8ರಿಂದ 10 ರೂಪಾಯಿ ಖರ್ಚು ಬೀಳುತ್ತದೆಯಂತೆ. ಈ ವಿಚಾರದಲ್ಲಿ ಲಾಭಕ್ಕಿಂತ ಮಾನವೀಯತೆ ದೊಡ್ಡದು ಎನ್ನುವ ಕಾರಣದಿಂದ ಕಡಿಮೆ ಬೆಲೆಯಲ್ಲಿ ಮಾಸ್ಕ್ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬೇರೆ ಶಾಪ್ಗಳಲ್ಲಿ ಇದೇ ಮಾಸ್ಕ್ನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ದೇಶದಲ್ಲಿ ಕರೊನಾ ಭೀತಿ ಹೆಚ್ಚಾದ ಹಿನ್ನೆಲೆ ಕಳೆದ ಎರಡೇ ದಿನಗಳಲ್ಲಿ 5000ಕ್ಕೂ ಹೆಚ್ಚು ಜನರು ಈ ಮೆಡಿಕಲ್ ಶಾಪ್ನಲ್ಲಿ ಮಾಸ್ಕ್ ಖರೀದಿ ಮಾಡಿದ್ದಾರಂತೆ. ವಿದ್ಯಾರ್ಥಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್ಗಳು ಮತ್ತು ಇತರೆ ಸಿಬ್ಬಂದಿಗೆ ಮಾಸ್ಕ್ನ ಅಗತ್ಯತೆ ಜಾಸ್ತಿ ಇದ್ದು ಅಂತವರಿಗೆ ಸಂತೋಷದಿಂದ ಮಾಸ್ಕ್ ನೀಡುತ್ತೇವೆ ಎಂದು ಮೆಡಿಕಲ್ ಶಾಪ್ನ ಮಾಲೀಕರು ತಿಳಿಸಿದ್ದಾರೆ. (ಏಜೆನ್ಸೀಸ್)