3 ಲಕ್ಷ ರೂ.ಗೆ ವೈದ್ಯಕೀಯ ಸೀಟು ಸೇಲ್!

14-68d2e4bac84d6
Published on

ಬೆಂಗಳೂರು: ಅಂಗವಿಕಲರ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ನಕಲಿ ವೈದ್ಯಕೀಯ ಪತ್ರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಏಜೆಂಟ್​ಗಳನ್ನು ಬಂಧಿಸಿರುವ ಮಲ್ಲೇಶ್ವರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈವರೆಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ. ರಾಜ್ಯದ ವಿವಿಧ ಜಿಲ್ಲೆಗಳ 21ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಂರ್ಪಸಿ ಒಬ್ಬೊಬ್ಬರಿಂದ 2 ರಿಂದ 3 ಲಕ್ಷ ರೂ. ಅಡ್ವಾನ್ಸ್ ಪಡೆದುಕೊಂಡು ಒಟ್ಟು 60 ಲಕ್ಷ ರೂ. ಸಂಗ್ರಹ ಮಾಡಿರುವುದು ತನಿಖೆಯಿಂದ ಬಯಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025ನೇ ಸಾಲಿನ ಯುಜಿಸಿಇಟಿ ಹಾಗೂ ಯುಜಿನೀಟ್ ಕೋರ್ಸ್​ಗಳಿಗೆ ಸೀಟು ಹಂಚಿಕೆ ಕೋರಿದ್ದ ವೇಳೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ನಂತರ ಅರ್ಜಿಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಿದಾಗ ಶ್ರವಣದೋಷ ವೈದ್ಯಕೀಯ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ನೋಂದಣಿ ಮಾಡಿಕೊಂಡಿದ್ದರು. ಅಭ್ಯರ್ಥಿಯೊಬ್ಬರ ತಂದೆ ಕೆಇಎಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಕೆಯಾಗಿರುವ ಬಗ್ಗೆ ದೂರು ನೀಡಿದ್ದರು. ಕೆಇಎ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಪ್ರಸನ್ನ ಸೂಚನೆಯಂತೆ ಸೆ.8 ರಂದು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ 21 ಜನರ ವಿರುದ್ಧ ದೂರು ದಾಖಲಿಸಲಾಗಿತ್ತು.

ಖಾಸಗಿ ಶಾಲೆಗಳ ಶಂಕೆ: ತನಿಖೆ ಕೈಗೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ತನಿಖಾಧಿಕಾರಿಗಳ ಖಾಸಗಿ ಶಾಲೆಗಳ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ತೀವ್ರ ಗೊಳಿಸಿದ್ದಾರೆ. ಏಜೆಂಟ್​ಗಳ ಸೂಚನೆಯಂತೆ ಕೆಇಎಗೆ ನಕಲಿ ದಾಖಲೆ ಸಲ್ಲಿಕೆ ಮಾಡಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಮೊದಲು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದ ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಡಾ.ಹರಿಪ್ರಸಾದ, ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಹಾಗೂ ಎಫ್​ಡಿಎ ಉಮೇಶ್ ನಾಗಪ್ಪ ಚೌದರಿ ಎಂಬುವರನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net