ವೈದ್ಯಕೀಯ, ಇಂಜಿನಿಯರಿಂಗ್​ ಸೀಟು ಹಂಚಿಕೆಗೆ ಹೊಸ ನಿಯಮ; ಇಲ್ಲಿದೆ ಪೂರ್ಣ ವಿವರ

Seat sharing
Published on

ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಇತರೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯೇಕವಾಗಿ ನಡೆಯುತ್ತಿದ್ದ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಮ್ಮೆಲೇ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತೀರ್ಮಾನಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರೂ ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್‌ಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು.

ಅಭ್ಯರ್ಥಿಗಳು ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?

ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್‌ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಉದಾಹರಣೆಗೆ ವೈದ್ಯಕೀಯ ಕೋರ್ಸ್ ಬೇಕೆಂದು ಮೊದಲ ಆದ್ಯತೆ ನೀಡುವ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಇಂಜಿನಿಯರಿಂಗ್ ಎನ್ನುವುದನ್ನು ದಾಖಲಿಸಬೇಕು. ಆಗ ವೈದ್ಯ ಸೀಟು ಸಿಗದಿದ್ದರೆ ಇಂಜಿನಿಯರಿಂಗ್ ಸೀಟು ಹಂಚಿಕೆ ಆಗುತ್ತದೆ. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್‌ಗಳು ಇವೆಯೊ ಅಷ್ಟೂ ಕೋರ್ಸ್‌ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು ಎಂದು ವಿವರಿಸಿದರು.

ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಎರಡೂ ಕೋರ್ಸ್‌ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್ ನಲ್ಲಿ ಇವೆರಡರಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ಆಡ್ಮಿಷನ್ ಆರ್ಡರ್ ಅನ್ನು ಆನ್‌ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್ನಲ್ಲಿ ತಪ್ಪದೇ ಅಪ್‌ಡೇಟ್ ಮಾಡಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಸದರಿ ಸೀಟು ಖಾಲಿ ಇದೆ ಎಂದು ಭಾವಿಸಿ, ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳುವ ಅಪಾಯ ಇರುತ್ತದೆ ಎಂದರು.

2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿಯು ಮಾಡಿರುವ ಆಪ್ಷನ್ ಎಂಟ್ರಿ ಪ್ರಕಾರ ಯಾವುದಾದರೊಂದು ಕೋರ್ಸ್‌ನಲ್ಲಿ (ವೈದ್ಯಕೀಯ, ಇಂಜಿನಿಯರಿಂಗ್, ಪಶುವೈದ್ಯ ಇತ್ಯಾದಿ) ಸೀಟು ಪಡೆಯಬೇಕು.

ವೈದ್ಯ ಹಾಗೂ ದಂತ ವೈದ್ಯ ಕೋರ್ಸ್‌ಗಳಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಆ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. 2ನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ, ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್‌ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಇಂಜಿನಿಯರಿಂಗ್ ಸೀಟುಗಳಿಗೆ 3ನೇ ಸುತ್ತಿನವರೆಗೂ ಭಾಗವಹಿಸಬಹುದು. ಆದರೆ 2ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಕಡ್ಡಾಯವಾಗಿ ಶುಲ್ಕು ಪಾವತಿಸಬೇಕು. 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಚಾಯ್ಸ್-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ಮಾಡಿದ್ದ ಆಪ್ಷನ್ ಎಂಟ್ರಿಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು 3ನೇ ಸುತ್ತಿಗೆ ಹೊಸದಾಗಿ ಆಪ್ಷನ್ ಎಂಟ್ರಿ ಮಾಡಬೇಕು. 3ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಪ್ಷನ್ ಎಂಟ್ರಿ ಮಾಡಬೇಕು.

ಮಾಪ್ ಅಪ್ ಸುತ್ತು

ಎರಡನೇ ಸುತ್ತಿನಲ್ಲಿ ಸಿಇಟಿ ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹದು.

ಅದೇ ರೀತಿ 2ನೇ ಸುತ್ತಿನಲ್ಲಿ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಆ ಸೀಟುಗಳನ್ನು ದಂಡ ಪಾವತಿಸಿ ರದ್ದುಪಡಿಸಿದ ನಂತರ ಇಂಜಿನಿಯರಿಂಗ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.

ಒಂದೆರಡು ದಿನದಲ್ಲಿ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಸಿಇಟಿ-2023ರಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮುಂದಿನ ಒಂದೆರಡು ದಿನಗಳಲ್ಲಿ ಸೀಟು ಮ್ಯಾಟ್ರಿಕ್ಸ್ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಕೆಇಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net