ವೈದ್ಯಕೀಯ ಕೋರ್ಸ್ ಶುಲ್ಕ ಪ್ರಕಟ: ಯಾವ ಕಾಲೇಜಿಗೆ ಎಷ್ಟು ಶುಲ್ಕ?

medical
Published on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025-26ನೇ ಸಾಲಿನ ವೈದ್ಯಕೀಯ ಕೋರ್ಸ್‌ಗಳ ಶುಲ್ಕದ ವಿವರಗಳನ್ನು ಪ್ರಕಟಿಸಿದೆ.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಇತರೆ ವಿಶ್ವವಿದ್ಯಾಲಯಗಳ ನೋಂದಣಿ ಶುಲ್ಕ ಸೇರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು 64,350 ರೂ.ಗಳಾಗಿದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟು 1,53,571 ರೂ., ಖಾಸಗಿ ಕಾಲೇಜುಗಳ ಖಾಸಗಿ ಕೋಟಾ ಸೀಟು 12,00,117 ರೂ., ಮತ್ತು ಎನ್‌ಆರ್‌ಐ ಕೋಟಾ ಸೀಟು 40,11,950 ರೂ.ಗಳಾಗಿವೆ ಎಂದು ಪ್ರಕಟಿಸಿದೆ.

ಈ ವರ್ಷ ವೈದ್ಯಕೀಯ ಕೋರ್ಸ್‌ಗಳ ಶುಲ್ಜವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರವು ಈ ಮೊದಲೇ ಪ್ರಕಟಿಸಿತ್ತು. ಆ ಪ್ರಕಾರ ಶುಲ್ಕದ ವಿವರಗಳನ್ನು ಪ್ರಕಟಿಸಿದೆ.

ಕಳೆದ ವರ್ಷ ವಿಶ್ವವಿದ್ಯಾಲಯದ ಶುಲ್ಕವನ್ನು ಹೊರತುಪಡಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ 1.40 ಲಕ್ಷ ರೂ., ಆಡಳಿತ ಮಂಡಳಿ ಕೋಟಾ ಸೀಟಿನ ಶುಲ್ಕ 11.88 ಲಕ್ಷ ರೂ., ಸರ್ಕಾರಿ ವೈದ್ಯಕೀಯ ಕಾಲೇಜು ಸೀಟುಗಳ ಶುಲ್ಕ 50 ಸಾವಿರ ರೂ.ಗಳಿತ್ತು.

ಈ ವರ್ಷವೂ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದವು. ಆದರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವನೆ ತಿರಸ್ಕರಿಸಿ, ಯಾವುದೇ ಕಾರಣಕ್ಕೂ ಈ ವರ್ಷ ಶುಲ್ಕ ಹೆಚ್ಚಿಸಲಾಗುವುದಿಲ್ಲ ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ಸ್ಪಷ್ಟವಾಗಿ ತಿಳಿಸಿತ್ತು. ಕಳೆದ ವರ್ಷ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಕೋರ್ಸುಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಿಸಲು ಅನುಮತಿ ನೀಡಲಾಗಿತ್ತು. ಹೀಗಾಗಿ ಈ ವರ್ಷ ಮತ್ತೆ ಶುಲ್ಕ ಹೆಚ್ಚಳ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net