

ಶಿವಮೊಗ್ಗ: ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಗಮಕ ಕಲೆಗಳಂತಹ ಮಾಧ್ಯಮಗಳು ಇಂದಿನ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ ಹೇಳಿದರು.
ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಗಂಧರ್ವ ಗಮಕ ಪಾಠಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಮಕ ಒಂದು ಉತ್ತಮ ಕಲೆ. ನಾಗಾಲೋಟದಲ್ಲಿ ಜೀವನ ನಡೆಸುತ್ತಿರುವ ನಾವು, ಮಕ್ಕಳಿಗೆ ಕೇವಲ ಓದು ಓದು ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಕಲೆಯಲ್ಲಿ ಆಸಕ್ತಿ ಹುಟ್ಟಿಸಬೇಕು ಎಂದರು.
ಮನೆಯಲ್ಲಿ ಕೆಲಸ ಮಾಡುತ್ತಲೇ ಗಮಕವನ್ನು ಗುನುಗುತ್ತ ಕೆಲಸ ನಿರ್ವಹಿಸಿದರೆ ಎಲ್ಲ ಒತ್ತಡಗಳೂ ಕಡಿಮೆ ಆಗುತ್ತವೆ. ಗಮಕ ಕಲೆಗೆ ಇಲಾಖೆಯಿಂದ ಎಲ್ಲ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ. ಎ.ವಿ.ಪ್ರಸನ್ನ, ದೇಶದಲ್ಲಿ ಗಂಗೆ, ತುಂಗೆ, ಭದ್ರೆಗಳು ಹೇಗೆ ಪುಣ್ಯ ನದಿಗಳೋ, ಹಾಗೆಯೇ ಗಮಕ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಕೇಶವಮೂರ್ತಿ ಮತ್ತು ವಿದ್ವಾನ್ ಮಾರ್ಕಾಂಡೇಯ ಅವಧಾನಿಗಳು ಅತ್ಯಂತ ಪವಿತ್ರ. ತಮಗೆ ಕುಮಾರವ್ಯಾಸ ಪ್ರಶಸ್ತಿ ನೀಡಿದ್ದು ಅದರ ಹಿರಿಮೆ ಹಿರಿಮೆ ಹೆಚ್ಚಿಸಿದೆ ಎಂದರು.
ನರರೋಗ ತಜ್ಞ ಡಾ. ಶಿವರಾಮಕೃಷ್ಣ, ಸಂಸ್ಥೆಯ ಅಧ್ಯಕ್ಷ ಅಚ್ಯುತ ಅವಧಾನಿ, ಪ್ರಾಚಾರ್ಯ ಪ್ರಸಾದ್ ಭಾರದ್ವಾಜ್ ಮತ್ತಿತರರಿದ್ದರು.