ಬೂಸ್ಟರ್ ಡೋಸ್ ಆತಂಕ ಬೇಡ: ಆರ್‌ಸಿಎಚ್‌ಒ ಡಾ. ನಾಗರಾಜ್ ನಾಯ್ಕ್

14 smg 13
Published on

ಶಿವಮೊಗ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸೆ. 31ರವರೆಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಿದ್ದು, ಬೂಸ್ಟರ್ ಡೋಸ್ ಬಗ್ಗೆ ಯಾವುದೇ ಆತಂಕ ಬೇಡ ಎಂದು ಆರ್‌ಸಿಎಚ್‌ಒ ಡಾ. ನಾಗರಾಜ್ ನಾಯ್ಕ್ ಹೇಳಿದರು.

ನಗರದ ಮೀಡಿಯಾ ಹೌಸ್‌ನಲ್ಲಿ ಬುಧವಾರ ಆರೋಗ್ಯ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಪತ್ರಕರ್ತರು ಮತ್ತು ಪತ್ರಿಕಾ ಸಿಬ್ಬಂದಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ 13.08 ಲಕ್ಷ ಜನರಿಗೆ ನೀಡಲಾಗಿದೆ. ಎರಡನೇ ಡೋಸ್ ಕೂಡ ಶೇ. 100ರಷ್ಟು ಯಶಸ್ವಿಯಾಗಿದೆ. ಬೂಸ್ಟರ್‌ಡೋಸ್ ನೀಡುವಲ್ಲಿ ಕೂಡ ಶೇ. 36ರಷ್ಟು ಪ್ರಗತಿ ಸಾಧಿಸಿದ್ದೇವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಮೊದಲ ಎರಡು ಡೋಸ್ ಪಡೆದವರಲ್ಲಿ ಹೆಚ್ಚಳವಾಗಿರುವುದರಿಂದ ಮೂರನೇ ಮತ್ತು ನಾಲ್ಕನೇ ಅಲೆಯಲ್ಲಿ ಸಾವಿನ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು ಎಂದರು.

100 ಅಥವಾ 150 ಜನರು ಏಕಕಾಲದಲ್ಲಿ ಲಸಿಕೆ ಪಡೆಯಲು ಇಚ್ಛಿಸಿದಲ್ಲಿ ಅವರಿರುವ ಸ್ಥಳಕ್ಕೆ ಹೋಗಿ ಆರೋಗ್ಯ ಇಲಾಖೆ ಲಸಿಕೆ ನೀಡಲಿದೆ. ಬೂಸ್ಟರ್ ಡೋಸ್‌ನಿಂದ ಯಾವುದೇ ಅಪಾಯವಿಲ್ಲ. ಇದರ ಬಗ್ಗೆ ಊಹಾಪೋಹಗಳಿಗೆ ಕಿವಿಗೊಡಬೇಡಿ. ಯಾವುದೇ ಲಸಿಕೆ ನೀಡುವ ಮೊದಲು ಅದನ್ನು ಹಲವು ಬಾರಿ ಪರೀಕ್ಷೆ, ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಈ ಹಿಂದೆ ಸರ್ಕಾರ ನೀಡಿದ ಪೋಲಿಯೋ ಲಸಿಕೆ ಸೇರಿದಂತೆ ಅನೇಕ ಲಸಿಕೆ ನಮ್ಮ ದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಕರೊನಾ ಲಸಿಕೆಯಿಂದ ಕೂಡ ಒಳ್ಳೆಯ ಪರಿಣಾಮ ಸಿಕ್ಕಿದೆ. ಸೆ. 31ರ ನಂತರ ಲಸಿಕೆ ಪಡೆಯಲು 385 ರೂ. ನೀಡಬೇಕು ಎಂದರು.

ಮೇಯರ್ ಸುನಿತಾ ಅಣ್ಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಜಿಲ್ಲಾ ಉಪಾಧ್ಯಕ್ಷ ವೈದ್ಯ, ಹಾಲಸ್ವಾಮಿ, ರಾಜ್ಯ ಸಂಘದ ನಿರ್ದೇಶಕ ರವಿಕುಮಾರ್, ತುಂಗಾನಗರ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಭೀಮಪ್ಪ, ಡಾ. ಭಾಗ್ಯಾ, ಡಾ. ಹರ್ಷಿತಾ, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net