

ಮಡಿಕೇರಿ:
ನಾಟಿ ಔಷಧಿಗೆ ಅಗತ್ಯವಿರುವ ಸ್ಥಳೀಯ ಔಷಧಿ ಸಸ್ಯಗಳನ್ನು ಮನೆಗಳಲ್ಲಿ ಬೆಳೆಸುವುದು ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಮೊದಲಿನಿಂದಲೂ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಕೈತೋಟದಲ್ಲಿ, ಹೂವಿನ ಗಿಡಗಳ ಮಧ್ಯೆ ಇಂಥ ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ತೋಟ, ಅರಣ್ಯಗಳಲ್ಲೂ ಔಷಧೀಯ ಗುಣಗಳಿರುವ ಸಸ್ಯಸಂಕುಲಗಳು ಹೇರಳವಾಗಿದೆ. ಇದೀಗ ವಾಣಿಜ್ಯಿಕವಾಗಿ ಬೆಳೆಸುವತ್ತ ಕೆಲವರು ಆಸಕ್ತಿ ತೋರಿಸುತ್ತಿರುವುದು ಇತ್ತೀಚಿನ ಬೆಳವಣಿಗೆ ಆಗಿದೆ.
ಅಪರೂಪದ ಜೀವವೈವಿಧ್ಯತೆ ಒಳಗೊಂಡಿರುವ ಕೊಡಗಿನಂಥ ಮಲೆನಾಡಿನ ಜಿಲ್ಲೆಗಳಲ್ಲಿ ಸ್ವಾಭಾವಿಕವಾಗಿಯೇ ಹಲವು ವೈವಿಧ್ಯಮಯ ಸಸ್ಯ ಸಂಪತ್ತನ್ನು ಕಾಣಬಹುದಾಗಿದೆ. ನೈಸರ್ಗಿಕವಾಗಿ ಇಲ್ಲಿ ಸಿಗುವ ಬಹುತೇಕ ಸಸ್ಯಗಳಲ್ಲಿ ಒಂದಿಲ್ಲೊAದು ಔಷಧೀಯ ಅಂಶಗಳನ್ನು ಗುರುತಿಸಲಾಗುತ್ತದೆ. ಸಾಂಪ್ರದಾಯಿಕ ವೈದ್ಯರಿಗೆ ಇಂಥ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಈ ಬಗೆಯ ಸಸ್ಯಗಳನ್ನು ವಾಣಿಜ್ಯಿಕವಾಗಿ ಬೆಳೆಸಲು ಇರುವ ಅವಕಾಶಗಳನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಕೃಷಿಕರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಮೂಲಕವೂ ಔಷಧೀಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಲಾಭ ಗಳಿಸುವ ಸಾಧ್ಯತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.
ರಾಜ್ಯದಲ್ಲಿ ಔಷಧಕ್ಕೆ ಬಳಕೆ ಮಾಡುವ ಸುಮಾರು 35 ಬಗೆಯ ಸಸ್ಯಗಳನ್ನು ಕೃಷಿ ವಿಶ್ವವಿದ್ಯಾಲಯಗಳ ಹಂತದಲ್ಲಿ ಪಟ್ಟಿ ಮಾಡಲಾಗಿದೆ. ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ದೇಶೀಯವಾಗಿ ಈ ಸಸ್ಯಗಳನ್ನು ಔಷಧೀಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಅಗ್ನಿಶಿಖೆ, ಲಕ್ಕಿಗಿಡ, ಅಳಲೆಕಾಯಿ, ಅರ್ಜುನಗಿಡ, ಸರ್ಪಗಂಧ, ಒಂದೆಲಗ, ದೊಡ್ಡಪತ್ರೆ, ಸಿಕಾ ಅಶೋಕ, ಪುನರ್ಪಳಿ, ಅಮೃತಬಳ್ಳಿ, ಮಧುನಾಶಿನಿ, ಆಡುಮಟ್ಟದ ಗಿಡ, ಮಾವಿನಕಾಯಿ ಶುಂಠಿ, ಕಪ್ಪುಅರಿಶಿನ, ದುರ್ವಾಸನೆ ಮರ, ಇನ್ಸುಲಿನ್ ಗಿಡ, ಆಲ್‌ಪಿನಿಯಾ, ಕಾಸರಕ, ಸಾಲುಧೂಪ, ನಾಗಸಂಪಿಗೆ, ಸುರಹೊನ್ನೆ, ದೇವಕಣಗಿಲೆ, ಮದ್ದರಸ, ಸಪ್ತಪರ್ಣಿ, ಬಿಲ್ವಪತ್ರೆ, ಕದಂಬವೃಕ್ಷ, ಎಕ್ಕ, ನುರ್ಕಲು, ಅಣ್ಣಿಸೊಪ್ಪು, ಅಂಟುವಾಳ, ನಸುಗುನ್ನಿಕಾಯಿ.. ಹೀಗೆ ಹಲವು ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ.
ಕೊಡಗಿನಲ್ಲಿ ಕಾಫಿ ಪ್ರಮುಖ ಬೆಳೆ. ಇದರ ಆದಾಯ ವರ್ಷಕ್ಕೆ ಒಂದು ಬಾರಿ ಮಾತ್ರ ಸಿಗುತ್ತದೆ. ಈ ವರ್ಷ ಉತ್ತಮ ಬೆಲೆಯೇನೋ ಸಿಗುತ್ತಿದೆ. ಆದರೆ ಇದೇ ಪರಿಸ್ಥಿತಿ ಮುಂದೆಯೂ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಕಾಫಿ ಬೆಳೆಗಾರರು ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳನ್ನು ಬೆಳೆಯಬಹುದು. ಇದರಿಂದಾಗಿ ವರ್ಷಪೂರ್ತಿ ಆದಾಯ ಗಳಿಸುವ ಅವಕಾಶಗಳೂ ಇರುತ್ತದೆ ಎನ್ನುತ್ತಾರೆ ತಜ್ಞರು. ನೆಕ್ಕಿ ಸೊಪ್ಪು, ಹಿಪ್ಪಲಿ, ಆಡುಸೋಗೆಯಂಥ ಗಿಡಗಳನ್ನು ಬೇಲಿಗಳಲ್ಲಿ ಬೆಳೆಸಿದರೆ, ಕರಿಧೂಪ, ಅಶೋಕದಂಥ ಮರಗಳನ್ನು ಕಾಫಿ ಗಿಡಗಳ ಮಧ್ಯೆ ನೆರಳು ಮರವಾಗಿ ಬೆಳೆಯಬಹುದಾಗಿದೆ ಎನ್ನುವ ಸಲಹೆ ಕೊಡುತ್ತಾರೆ.
ಕಾಫಿ ಜತೆಗೆ ಸ್ಥಳೀಯ ಸಸ್ಯ ಸಂಪನ್ಮೂಲಗಳ ಬಳಕೆ ಆಗಬೇಕು ಎನ್ನುವ ನಿಟ್ಟಿನಲ್ಲೂ ಅಧ್ಯಯನಗಳು ನಡೆದಿದೆ. ಬ್ರಾಹ್ಮಿ, ನೀರು ಬ್ರಾಹ್ಮಿ, ಲಾವಂಚವನ್ನು ಕಾಫಿಯಲ್ಲಿ ಆಂತರಿಕ ಬೆಳೆಯಾಗಿ ಬೆಳೆಯುವ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಂಶೋಧನೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ಔಷಧೀಯ ಸಸ್ಯ ಮಂಡಳಿಯೂ ಕಾರ್ಯೋನ್ಮುಖವಾಗಿದ್ದು, ಔಷಧೀಯ ಸಸ್ಯಗಳನ್ನು ಬೆಳೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೃಷಿಕರ ಆದಾಯ ದುಪ್ಪಟ್ಟುಗೊಳಿಸಲು ಇರುವ ಸಾಧ್ಯತೆಗಳ ಬಗ್ಗೆಯೂ ಚಟುವಟಿಕೆಗಳು ಪ್ರಗತಿಯಲ್ಲಿದೆ.
ರಾಜ್ಯ ಸರ್ಕಾರ ಕೂಡ ಔಷಧೀಯ ಸಸ್ಯಗಳನ್ನು ಬೆಳೆಸುವವರಿಗೆ ಅನೇಕ ರೀತಿಯಲ್ಲಿ ಪ್ರೋತ್ಸಾಹ ಕೊಡುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರವೂ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿ ಸುಮಾರು 30ಎಕರೆ ವಿಸ್ತೀರ್ಣದ ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ಇದ್ದು, ಔಷಧೀಯ ಸಸ್ಯಗಳ ಸಂಗ್ರಹಣೆ, ಸಂರಕ್ಷಣೆ ಮೂಲ ಮತ್ತು ಸಸ್ಯಾಭಿವೃದ್ಧಿಯ ಮೂಲಕ ರೈತರಿಗೆ ಅಗತ್ಯವಿರುವ ಗುಣಮಟ್ಟದ ಬೀಜ ಅಥವಾ ಸಸಿಗಳನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಇಳುವರಿ ಮತ್ತು ಗುಣಮಟ್ಟ ತಳಿಗಳ ಅಭಿವೃದ್ಧಿ ಹಾಗೂ ಬೇಸಾಯ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿದ್ದು, ಅಗತ್ಯವಿರುವ ರೈತರಿಗೆ ಹಾಗೂ ಫಲಾನುಭವಿಗಳಿಗೆ ಇಲ್ಲಿ ನೆರವು ಸಿಗಲಿದೆ.
ಭಾರತದಲ್ಲಿ ಸದ್ಯಕ್ಕೆ ಔಷಧೀಯ ಸಸ್ಯಗಳ ಮಾರುಕಟ್ಟೆ ಮೌಲ್ಯ ಸುಮಾರು 7-8 ಲಕ್ಷ ಕೋಟಿ ರೂ. ಇದೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಈ ಮೊತ್ತ 11 ಲಕ್ಷ ಕೋಟಿ ರೂ. ವ್ಯವಹಾರ ತಲುಪುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಮತ್ತೊಂದು ಕಡೆ ವಿವಿಧ ಕಾರಣಗಳಿಂದ ಔಷಧೀಯ ಸಸ್ಯಗಳು ಕ್ಷೀಣಿಸುತ್ತಿವೆ. ಹಾಗಾಗಿ ದಿನದಿಂದ ದಿನಕ್ಕೆ ಇಂಥ ಸಸ್ಯಗಳಿಗೆ ಬೇಡಿಕೆ ಜಾಸ್ತಿ ಆಗುತ್ತಿದೆ. ಅದರಲ್ಲೂ ಕೃತಕ ಗೊಬ್ಬರಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆಸಿದ ಗುಣಮಟ್ಟದ ಔಷಧೀಯ ಸಸ್ಯಗಳಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುವುದರಿಂದ ಕೃಷಿಕರು ಈ ಕ್ಷೇತ್ರದ ಕಡೆ ಗಮನ ಹರಿಸಬಹುದಾಗಿದೆ ಎನ್ನುವ ಅಭಿಪ್ರಾಯಗಳು ತಜ್ಞರಿಂದ ವ್ಯಕ್ತವಾಗುತ್ತಿದೆ.
ಸದ್ಯದ ಮಟ್ಟಿಗೆ ಔಷಧಿ ಸಸ್ಯಗಳಿಗೆ ಮಾರುಕಟ್ಟೆ ಸಮಸ್ಯೆ ಆಗಬಹುದು. ಹಾಗಾಗಿ ರೈತರು ಸಂಘಟಿತರಾಗಿ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರಿಂದ ಮಾರುಕಟ್ಟೆಯೇ ರೈತರ ಬಳಿಗೆ ಬರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪನೆ ಅತ್ಯುತ್ತಮ ಮಾರ್ಗವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸಂಬAಧ ಯೋಜನೆಗಳನ್ನು ರೂಪಿಸುತ್ತಿರುವ ಸರ್ಕಾರಗಳೂ ಈ ಹಿನ್ನೆಲೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯುವವರ ಬೆಂಬಲಕ್ಕೆ ನಿಲ್ಲಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಅಧಿಕಾರಿಗಳು.
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಅಳಿವಿನಂಚಿನಲ್ಲಿರುವ ಆಯ್ದ ಔಷಧೀಯ ಸಸ್ಯಗಳ ಸಂರಕ್ಷಣೆ, ಪ್ರಸರಣ ಹಾಗೂ ಸಂತಾನಾಭಿವೃದ್ಧಿ ಕುರಿತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಔಷಧಿ ಗಿಡಗಳ ಸಂರಕ್ಷಣೆ ಮತ್ತು ಮಹತ್ವದ ಕುರಿತು ಶಾಲಾ ಮಕ್ಕಳಿಗೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಹಾಗೂ ರೈತರಿಗೆ ಅರಿವು ಮೂಡಿಸಲು ವ್ಯಾಪಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ
ಸ್ಥಳೀಯ ಬೆಳೆಗಳಿಗೆ ಇರುವ ಸ್ಥಿರತೆ ಹೊರಗಿನ ಬೆಳೆಗಳಿಗೆ ಇಲ್ಲ. ಹಾಗಾಗಿ ನಮ್ಮಲ್ಲಿನ ಔಷಧೀಯ ಸಸ್ಯಗಳ ಅಭಿವೃದ್ಧಿ ಮತ್ತು ಕೃಷಿಗೆ ಹೆಚ್ಚು ಅವಕಾಶಗಳಿವೆ. ಕೊಡಗಿನಲ್ಲಿ ಔಷಧೀಯ ಸಸ್ಯಗಳ ಜನಪ್ರಿಯತೆ ಹೆಚ್ಚಿಸಲು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ನನ್ನನ್ನು ಆಯ್ಕೆ ಮಾಡಿಕೊಂಡಿದೆ. ನಮ್ಮಲ್ಲಿ ಹಿಪ್ಪಲಿ, ಕರಿಧೂಪ, ಅಶೋಕ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಆಸಕ್ತ ರೈತರಿಗೆ ಇದನ್ನು ನೀಡಲಾಗುವುದು
ನಾಪಂಡ ಪೂಣಚ್ಚ, ಮುಖ್ಯಸ್ಥರು, ಆದಿ ಪೆಪ್ಪರ್ ಡೆಮೋ ಫಾರ್ಮ್ ಮತ್ತು ಸಂಶೋಧನಾ ಕೇಂದ್ರ