

ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಕೆಲಸದ ಹೊರೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಮುಷ್ಕರ ನಿರತ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಪದಾಧಿಕಾರಿಗಳನ್ನು ವಿಕಾಸಸೌಧದ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಈ ಭರವಸೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಹೊರೆ ಅಧಿಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಶ್ರಮವಿಲ್ಲದೆ ಬರ ಸಂದರ್ಭದಲ್ಲಿ ್ರೂಟ್ ಮೂಲಕ ನೈಜ ದತ್ತಾಂಶಗಳನ್ನು ಪಡೆದು ರೈತರ ಖಾತೆಗೆ ನೇರವಾಗಿ ಬರ ಪರಿಹಾರ ತಲುಪಿಸುವುದು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಬೀಟ್ ಆಪ್ ಹಾಗೂ ಆಧಾರ್ ಸೀಡಿಂಗ್ ಹಾಗೂ ಫೌತಿ ಖಾತೆ ಅಭಿಯಾನದಲ್ಲೂ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವವಾದದ್ದು. ಹೀಗಾಗಿ ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಎಲ್ಲ ಅಭಿಯಾನಗಳಿಗೂ ಒಟ್ಟಿಗೆ ಚಾಲನೆ ನೀಡದೆ, ಅವರ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೊಬೈಲ್ ಅಥವಾ ಲ್ಯಾಪ್ ಟಾಪ್ ನೀಡಬೇಕು ಎಂಬ ಬೇಡಿಕೆ ಇದೆ. ಸರ್ಕಾರವೂ ಈಗಾಗಲೇ ಈ ಬಗ್ಗೆ ಚಿಂತನೆ ನಡೆಸಿದೆ. ಫೀಲ್ಡ್ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಲ್ಯಾಪ್ ಟಾಪ್-ಮೊಬೈಲ್ ಎರಡೂ ರೀತಿ ಕೆಲಸ ಮಾಡಬಲ್ಲ ಟ್ಯಾಬ್ ನೀಡುವ ಬಗ್ಗೆ ಚಿಂತಿಸಲಾಗಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಅಧಿಕಾರಿಗಳಿಗೆ ಟ್ಯಾಬ್ ವಿತರಿಸಲಾಗಿದ್ದು, ಮುಂದಿನ ವರ್ಷದೊಳಗೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೂ ಟ್ಯಾಬ್ ನೀಡಲು ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳಿಗೂ ಸರ್ಕಾರಿ ಕಚೇರಿ ನಿರ್ಮಿಸಬೇಕು ಮೂಲಭೂತ ಸೌಲಭ್ಯ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆ ಇದೆ. ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂಬ ವಿಚಾರದಲ್ಲಿ ನನ್ನ ಅಭಿಪ್ರಾಯವೂ ಅದೇ ಆಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.
ಪತಿ-ಪತ್ನಿ ಪ್ರಕರಣದಲ್ಲಿ ಅಂತತ್ ಜಿಲ್ಲೆ ವರ್ಗಾವಣೆ ನೀಡುವ ಸಂಬಂಧ ಕೆಸಿಎಸ್‌ಆರ್ 16ಅ ನಿಯಮದ ಅನ್ವಯ ನಿಯಮಬದ್ಧವಾಗಿ ಬಂದಿರುವ ಪ್ರಸ್ತಾವನೆಗಳ ಕುರಿತು ಮುಂದಿನ ವಾರದೊಳಗೆ ಕ್ರಮವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳನ್ನು ಅನಗತ್ಯವಾಗಿ ಎಸಿ, ಡಿಸಿ ಕಚೇರಿಗಳಿಗೆ ಮಾಡಲಾಗಿರುವ ನಿಯೋಜನೆ ರದ್ದುಗೊಳಿಸುವ ಸಂಬಂಧ ಈಗಾಗಲೇ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದಿಂದ ಸಾಧ್ಯವಾಗುವ ಎಲ್ಲ ಬೇಡಿಕೆಗಳ ಬಗ್ಗೆಯೂ ಚಿಂತಿಸಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಪರಿಶೀಲಿಸುವ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಅವರು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಜೊತೆ ಚರ್ಚಿಸಲಿದ್ದಾರೆ. ಅಮ್ಲನ್ ಆದಿತ್ಯ ಬಿಸ್ವಾಸ್ ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.
ಕಂದಾಯ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದರು.