ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ

WhatsApp Image 2023-10-10 at 4.36.13 PM
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ ಎಂದು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ರಾಮನಾಥತುಂಗಾ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕುಂದು-ಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಪಂಚಾಯಿತಿಯಲ್ಲೂ 15ನೇ ಹಣಕಾಸು ಯೋಜನೆಯ ಹಣವನ್ನು ಕುಡಿಯುವ ನೀರಿಗಾಗಿ ಮೀಸಲಿಡಲಾಗಿದೆ. ಯಾವುದೇ ರೀತಿಯಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದರ ಜತೆಗೆ 2 ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನರ ಸಮಸ್ಯೆ ಆಲಿಸಲಾಗುತ್ತಿದೆ. ಆ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೆಲಸ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಅತಿ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಚಾಲನೆ ನೀಡಿ ತದನಂತರ ಈ ಕಾರ್ಯಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಸಚಿವರು ಎನ್.ಶೆಟ್ಟಹಳ್ಳಿ ಹಾಗೂ ರಾಮನಾಥತುಂಗಾ ಗ್ರಾಮಪಂಚಾಯಿತಿಗೆ ಸೇರಿದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ಜಿ.ಪಂ.ಮಾಜಿ ಸದಸ್ಯ ರಾಮತ್‌ಜಾನ್‌ಬಾಬು, ಡಿ.ಎ.ಜವರಪ್ಪ, ಕೆ.ಪಿ.ಸಿ.ಸಿ ಸದಸ್ಯ ನಿತಿನ್‌ವೆಂಕಟೇಶ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಲೋಕೇಶ್, ಆರ್.ಟಿ.ರೇವಣ್ಣ, ಸದಸ್ಯ ರಾಜಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಆರ್.ಎಸ್.ಮಹದೇವ್, ರಾಮಚಂದ್ರ, ಹಿಟ್ನಹಳ್ಳಿ ಪರಮೇಶ್, ಪಿ.ಮಹದೇವ್, ಪಿ.ಪಿ.ಮಹದೇವ್, ಕುಮಾರ್, ಪಟೇಲ್ ಮಹದೇವ್, ತಹಸೀಲ್ದಾರ್ ಕುಂಞ ಮೊಹಮ್ಮದ್, ತಾ.ಪಂ.ಇಒ ಸುನೀಲ್‌ಕುಮಾರ್, ಡಾ.ಸೋಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net