

ಸಾಗರ: ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಮ್ಮ ನೂತನ ಸಮಿತಿ ಅನೇಕ ಸವಾಲುಗಳ ನಡುವೆಯೂ ಶೈಕ್ಷಣಿಕ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥ ರಾವ್ ಹೇಳಿದರು.
2022ರ ಮಾ.17ರಂದು ನಮ್ಮ ಹೊಸ ಸಮಿತಿ ಅಧಿಕಾರಕ್ಕೆ ಬಂದಿತು. ಹಿಂದಿನ ಸಮಿತಿ ನಮ್ಮ ಆಡಳಿತಕ್ಕೆ ಸಾಕಷ್ಟು ಅಡೆತಡೆ ಉಂಟು ಮಾಡಿತು. ಬ್ಯಾಂಕ್ ಖಾತೆ ಸೀಜ್ ಮಾಡಿದ್ದರಿಂದ ಸಿಬ್ಬಂದಿಗೆ ಸಂಬಳ ಕೊಡಲು ಸಹ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ನ್ಯಾಯಾಲಯದಲ್ಲಿರುವ ಪ್ರಕರಣ ನಮ್ಮ ಪರವಾಗಿ ಆಗಲು ಸಮರ್ಥ ದಾಖಲೆ ನೀಡಿ, ಹೊಸ ಬ್ಯಾಂಕ್ ಖಾತೆ ತೆರೆದು ಕಾಲೇಜು ಆಡಳಿತ ಯಶಸ್ವಿಯಾಗಿ ನಡೆಯುತ್ತಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಹಿಂದಿನ ಸಮಿತಿ ಮಾಡಿದ್ದ 1 ಕೋಟಿ ರೂ. ಸಾಲವನ್ನು ಬಡ್ಡಿಸಹಿತ ತೀರಿಸಲಾಗಿದೆ ಆರ್ಥಿಕವಾಗಿ ನಮ್ಮ ಸಂಸ್ಥೆ ಸುಸ್ಥಿತಿಯಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಹಿಂದಿನ ಸಮಿತಿ ವಿರುದ್ಧ ಲೋಕಾಯುಕ್ತ ಮತ್ತು ಪೊಲೀಸ್ ಠಾಣೆಗೆ ಬೇರೆಬೇರೆ ಪ್ರಕರಣದಲ್ಲಿ ದೂರು ನೀಡಲಾಗಿದೆ. ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಬೋರ್ಡ್ ಖರೀದಿಯಲ್ಲಿ ಅಕ್ರಮ ನಡೆದಿರುವ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಿ.ಇಡಿ ಕಾಲೇಜು ಕಾಮಗಾರಿ ಕಳಪೆಯಾಗಿದೆ. ಟೆಂಡರ್ ಕರೆಯದೆಯೇ ಕಾಮಗಾರಿ ನೀಡಿರುವ, ತಿಂಗಳ ಸಭೆಯ ನಡಾವಳಿ ಪುಸ್ತಕ ಹೊತ್ತೊಯ್ದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಸುಮಾರು 2500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅ.20ರಂದು ಸಂಸ್ಥೆಯ ಸರ್ವಸದಸ್ಯರ ಸಭೆ ಕರೆಯಲಾಗಿದೆ. ಈ ಸಂದರ್ಭ ಸಂಸ್ಥೆ ಬೆಳವಣಿಗೆ ಬಗ್ಗೆ ಸದಸ್ಯರ ಗಮನ ಸೆಳೆಯಲಾಗುತ್ತದೆ ಎಂದರು.
ಡಾ. ಎಚ್.ಎಂ.ಶಿವಕುಮಾರ್, ವೆಂಕಟೇಶ್ ಕವಲಕೋಡು, ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.