

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ತಡೆಯುವ ನಿಟ್ಟಿನಲ್ಲಿ ನಿರ್ಮಾಣವಾಗುವ ಕಟ್ಟಡ ಕಾಮಗಾರಿಗಳ ಸಮರ್ಪಕ ಮೇಲ್ವಿಚಾರಣೆ ಮತ್ತು ಕಟ್ಟಡ ಪ್ರವೇಶ ಅನುಮತಿ ಪತ್ರ ನಿರ್ವಹಣಾ ವ್ಯವಸ್ಥೆಗಾಗಿ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಿದರು.
ನೂತನ ತಂತ್ರಾಂಶದ ಮೊಬೈಲ್ ಅಪ್ಲಿಕೇಶನ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ‘ ಸೆಪ್ಟೆಂಬರ್ 1ರಿಂದ ನೂತನ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೆ ಬರಲಿದೆ. ಅರ್ಜಿದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಎಂಸಿಸಿ ಬಿಲ್ಡಿಂಗ್ ಲೈಸನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಕಟ್ಟಡ ಕಾಮಗಾರಿಯ ಮೊದಲನೇ ಹಂತದಿಂದ ಆರಂಭಗೊಂಡು ವಿವಿಧ ಹಂತಗಳಲ್ಲಿ ಅರ್ಜಿಯನ್ನು ಈ ತಂತ್ರಾಂಶದ ಮೂಲಕ ಪರಿಶೀಲನೆಗಾಗಿ ಮಹಾನಗರ ಪಾಲಿಕೆ ಅಭಿಯಂತರರಿಗೆ ಸಲ್ಲಿಸಬೇಕು ಎಂದರು.
ಮಹಾನಗರ ಪಾಲಿಕೆ ಅಭಿಯಂತರರು ಕಟ್ಟಡ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಕಾಮಗಾರಿಯ ಎಲ್ಲ ಹಂತಗಳ ಪರಿಶೀಲನೆಯನ್ನು ಈ ತಂತ್ರಾಂಶದ ಮೂಲಕವೇ ಪರಿಶೀಲನೆ ಮಾಡಬಹುದು. ಜನರು ಸರಿಯಾಗಿ ಕಾನೂನು ಪಾಲನೆ ಮಾಡಿ ಕಟ್ಟಡ ನಿರ್ಮಿಸಲು ಈ ಮೊಬೈಲ್ ಅಪ್ಲಿಕೇಶನ್ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ರಾಜ್ಯ ಹೈಕೋರ್ಟ್ ಆದೇಶದಂತೆ ಈ ತಂತ್ರಾಂಶ ಜಾರಿಗೊಳಿಸಿದ ಮೊದಲ ಮಹಾನಗರ ಪಾಲಿಕೆ ಮಂಗಳೂರು ಪಾಲಿಕೆಯಾಗಿದೆ.ಪಾಲಿಕೆಯ ಅಭಿಯಂತರರು ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಆಡಳಿತಾತ್ಮಕ ಪರಿಶೀಲನೆಗೆ ಈ ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದ್ದು, ಅಭಿಯಂತರರ ವರದಿಯ ಆಧಾರದ ಮೇಲೆ ಮೇಲಧಿಕಾರಿಗಳು ಪರಿಶೀಲಿಸಿ ಕಟ್ಟಡ ಪ್ರವೇಶ ಅನುಮತಿ ಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಆಯುಕ್ತರ ಇ-ಸಿಗ್ನೇಚರ್ ಬಳಿಕ ಅರ್ಜಿದಾರರು ತಮ್ಮ ಕಟ್ಟಡ ಪ್ರವೇಶ ಅನುಮತಿ ಪತ್ರವನ್ನು ಈ ಮೊಬೈಲ್ ಅಪ್ಲಿಕೇಶನ್ ಮೂಲಕವೇ ತೆಗೆಯಬಹುದು. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಸುಧೀರ್ ಶೆಟ್ಟಿ
ಕಣ್ಣೂರು ವಿವರ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಉಪಮೇಯರ್ ಸುನೀತಾ, ಕಾರ್ಪೋರೇಟರ್ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಉಪಸ್ಥಿತರಿದ್ದರು.