

ಮಂಜುನಾಥ ತಿಮ್ಮಯ್ಯ ಮೈಸೂರು
ರಾಜ್ಯದ ಪ್ರತಿಷ್ಠಿತ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಹೆಚ್ಚುವರಿಯಾಗಿ 50 ಎಂಬಿಬಿಎಸ್ ಸೀಟ್‌ಗಳು ದೊರೆತಿವೆ. ಇದು 2024-25ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ.
ಇದು ಶತಮಾನೋತ್ಸವ ಸಂಭ್ರಮದಲ್ಲಿರುವ ಈ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ಪ್ರಗತಿ, ಆರೋಗ್ಯ ಸೇವೆ ವಿಸ್ತರಣೆಗೆ ನೆರವಾಗಲಿದ್ದು, ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.
ಹಿಂದೆ ಈ ಕಾಲೇಜಿನಲ್ಲಿ ಎಂಬಿಬಿಎಸ್ 100 ಸೀಟ್‌ಗಳಿದ್ದವು. 2011ನೇ ಶೈಕ್ಷಣಿಕ ಸಾಲಿನಲ್ಲಿ ಈ ಸೀಟ್‌ಗಳ ಸಂಖ್ಯೆ 150ಕ್ಕೆ ಏರಿಕೆ ಆಯಿತು. ಹತ್ತು ವರ್ಷ ಸೀಟ್‌ಗಳು ಹೆಚ್ಚಳವಾಗಿರಲಿಲ್ಲ. 2021ರಲ್ಲಿ ದೆಹಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ(ಎನ್‌ಎಂಸಿ)ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ಎನ್‌ಎಂಸಿ ಪ್ರತಿನಿಧಿಗಳ ತಂಡವು ಅನಿರೀಕ್ಷಿತವಾಗಿ ಇಲ್ಲಿಗೆ ಭೇಟಿ ನೀಡಿತ್ತು. ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಲಭ್ಯ ಇರುವ ಮೂಲ ಸೌಕರ್ಯಗಳು, ಹಾಸಿಗೆ ಸಾಮರ್ಥ್ಯ, ಅನುದಾನ, ಶೈಕ್ಷಣಿಕ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ನಸಿರ್ಂಗ್ ಸಿಬ್ಬಂದಿ ಸೇರಿದಂತೆ ಅಗತ್ಯ ಸವಲತ್ತುಗಳ ಕುರಿತು ಪರಿಶೀಲನೆ ನಡೆಸಿ ಸೀಟ್ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿತ್ತು. ಇದರ ಫಲವಾಗಿ 150ರಿಂದ 200ಕ್ಕೆ ಎಂಬಿಬಿಎಸ್ ಸೀಟ್ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಹೆಚ್ಚುವರಿ 50 ಸೀಟ್‌ಗಳು ಸಿಕ್ಕಿದಂತಾಗಿದೆ.
ಪ್ರಸಕ್ತ ಸಾಲಿನ ಮೆಡಿಕಲ್ ವಿದ್ಯಾರ್ಥಿಗಳ ಆಯ್ಕೆ ಸಂದರ್ಭದಲ್ಲೇ ಹೆಚ್ಚುವರಿ ಸೀಟ್‌ಗಳಿಗೂ ದಾಖಲಾತಿ ನಡೆಯಲಿದೆ. ಸದ್ಯ ಪ್ರವೇಶಾತಿ ಪ್ರಕ್ರಿಯೆಯು ಮ್ಯಾಟ್ರಿಕ್ಸ್ ನಿಗದಿ ಹಂತದಲ್ಲಿ ಇದೆ. ಸೆಪ್ಟೆಂಬರ್‌ನಲ್ಲಿ ಪ್ರವೇಶಾತಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಹೆಚ್ಚುವರಿ ಸೀಟ್‌ಗಳು ದೊರೆತರೆ ಆರೋಗ್ಯ ಸೇವೆಗೆ ಇನ್ನಷ್ಟು ವಿದ್ಯಾರ್ಥಿಗಳು ದೊರೆಯಲಿದ್ದಾರೆ. ವೈದ್ಯಕೀಯ ಸ್ನಾತಕ ಪದವಿ ಅಧ್ಯಯನ ಮಾಡುವವರು 6 ತಿಂಗಳು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕಿದೆ. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ 150 ವಿದ್ಯಾರ್ಥಿಗಳು ವಾರದಲ್ಲಿ 6 ಯೂನಿಟ್‌ಗಳಲ್ಲಿ ವೈದ್ಯ ಸೇವೆಯನ್ನು ಪ್ರಾಯೋಗಿಕ ಅಭ್ಯಾಸ ಮಾಡುತ್ತಾರೆ. 200 ವಿದ್ಯಾರ್ಥಿಗಳಾದರೆ ಇದನ್ನು 8 ಯೂನಿಟ್‌ಗೆ ವಿಸ್ತರಿಸಬೇಕಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳು ಹೆಚ್ಚಾಗುವುದರಿಂದ ಮೆರಿಟ್‌ನಲ್ಲಿ ಉತ್ತೀರ್ಣರಾಗುವ ಮತ್ತಷ್ಟು ಬಡ ಕುಟುಂಬದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಓದಲು ಅವಕಾಶ ಲಭ್ಯವಾಗಲಿದೆ. ಜತೆಗೆ, ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಇನ್ನಷ್ಟು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದ ಮತ್ತಷ್ಟು ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಆಸ್ಪತ್ರೆಯ ಚಿಕಿತ್ಸೆ ಸಾಮರ್ಥ್ಯವೂ ವಿಸ್ತರಣೆಯಾಗಲಿದೆ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಸ್ನಾತಕೋತ್ತರ ವೈದ್ಯಕೀಯ(ಪಿಜಿ) ಸೀಟ್‌ಗಳ ಹೆಚ್ಚಳಕ್ಕೆ ಅನುಮೋದನೆ ದೊರೆತಿಲ್ಲ. ಹಾಲಿ ಇರುವ 150ರಿಂದ 200ಕ್ಕೆ ಪಿಜಿ ಸೀಟ್ ಏರಿಕೆ ಸಂಬಂಧ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸ್ನಾತಕ ಪದವಿ(ಯುಜಿ) ಸೀಟ್ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ಅನುಮತಿ ಸಿಗುವ ನಿರೀಕ್ಷೆ ಇದೆ.
ಕಾಲೇಜಿನಲ್ಲಿ ಹಾಲಿ 200 ಎಂಬಿಬಿಎಸ್, 150 ಸ್ನಾತಕೋತ್ತರ ವೈದ್ಯಕೀಯ, 100 ಬಿಎಸ್ಸಿ ನರ್ಸಿಂಗ್, 40 ಜಿಎನ್‌ಎಂ, 100 ಪ್ಯಾರಾ ಮೆಡಿಕಲ್, 50 ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್‌ನ ವಿದ್ಯಾರ್ಥಿಗಳು ಸೇರಿ 640 ವಿದ್ಯಾರ್ಥಿಗಳು ವಾಸ್ಯಂಗ ಮಾಡುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಶುರುವಾಗಲಿರುವ 3 ಕಾಲೇಜು ಸೇರಿದಂತೆ ರಾಜ್ಯದಲ್ಲಿ 73 ವೈದ್ಯಕೀಯ ಕಾಲೇಜುಗಳಿವೆ. ಸದ್ಯ 11,745 ವೈದ್ಯಕೀಯ ಸೀಟ್‌ಗಳು ಲಭ್ಯವಾಗುತ್ತಿದ್ದು, 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095ಕ್ಕೆ ಏರಿಕೆಯಾಗಲಿದೆ. ಮೆಡಿಕಲ್ ಕಾಲೇಜುಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ 2ನೇ ಸ್ಥಾನದಲ್ಲಿದೆ. 2023ರ ಅಂಕಿ-ಅಂಶಗಳ ಪ್ರಕಾರ ತಮಿಳುನಾಡಿನಲ್ಲಿ 74 ಮೆಡಿಕಲ್ ಕಾಲೇಜುಗಳಿವೆ. ಆ ವೇಳೆಗೆ ಕರ್ನಾಟಕದಲ್ಲಿ 70 ಕಾಲೇಜುಗಳಿದ್ದವು. ಇದರ ನಂತರ ಸ್ಥಾನದಲ್ಲಿ ಉತ್ತರ ಪ್ರದೇಶ-68 ಹಾಗೂ ಮಹಾರಾಷ್ಟ್ರ-67, ತೆಲಂಗಾಣ-56 ಕಾಲೇಜುಗಳಿವೆ.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಬೋಧಕರ ಕೊರತೆ ತೀವ್ರವಾಗಿ ಕಾಡುತ್ತಿದೆ. 4 ಸಹಾಯಕ ಪ್ರಾಧ್ಯಾಪಕರು, 10 ಸಹ ಪ್ರಾಧ್ಯಾಪಕರ ಹುದ್ದೆ ಖಾಲಿ ಇವೆ. ಇವುಗಳು ಸೇರಿದಂತೆ ಅಂದಾಜು 150 ವಿವಿಧ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಭರವಸೆ ದೊರೆತಿದೆ. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಶತಮಾನೋತ್ಸವ ಅಂಗವಾಗಿ ರಾಜ್ಯ ಸರ್ಕಾರವು 89 ಕೋಟಿ ರೂ. ಅನುದಾನದಲ್ಲಿ 14 ನವೀಕರಣ ಕಾಮಗಾರಿಗಳನ್ನು ಎಂಎಂಸಿಆರ್‌ಐನಲ್ಲಿ ಮತ್ತು ಅಧೀನದಲ್ಲಿರುವ ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಪಿಕೆಟಿಬಿ ಆಸ್ಪತ್ರೆಯಲ್ಲಿ ಕೈಗೊಂಡಿದ್ದು, ಈ ಎಲ್ಲ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಶತಮಾನೋತ್ಸವದ ಹೊತ್ತಿಗೆ ಎಲ್ಲ ಕಾಮಗಾರಿಯನ್ನು ಮುಗಿಸಲು ಪ್ರಯತ್ನಿಸಲಾಗುತ್ತಿದೆ
ಕೆ.ಆರ್. ಆಸ್ಪತ್ರೆ ಮೈಸೂರಿಗೆ ಅಷ್ಟೇ ಸಿಮೀತವಾಗಿಲ್ಲ. ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಇದರಿಂದ ಇದರ ಮೇಲೆ ಒತ್ತಡ ಅಧಿಕವಾಗಿದೆ. ಆದ್ದರಿಂದ ಈಗಿರುವ 1200 ಹಾಸಿಗೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಳ, ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಬೇಡಿಕೆ ಇದೆ. ಇದಕ್ಕೆ ಸರ್ಕಾರದಿಂದ ಹಸಿರು ನಿಶಾನೆ ದೊರೆಯುವ ನಿರೀಕ್ಷೆ ಇದೆ.
ಹೊಸದಾಗಿ 50 ಎಂಬಿಬಿಎಸ್ ಸೀಟ್‌ಗಳು ದೊರೆತಿವೆ. ಇದರಿಂದ 150 ರಿಂದ 200ಕ್ಕೆ ಸೀಟ್‌ಗಳ ಸಂಖ್ಯೆ ಏರಿಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲೇ ಇದು ಜಾರಿಗೆ ಬರಲಿದ್ದು, ಇದರಿಂದ ಕಾಲೇಜಿಗೆ ಮತ್ತು ಕೆ.ಆರ್.ಆಸ್ಪತ್ರೆಗೆ ಅನುಕೂಲವಾಗಲಿದೆ.ಡಾ.ಕೆ.ಆರ್. ದಾಕ್ಷಾಯಿಣಿನಿರ್ದೇಶಕಿ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ