

ಶಿಮ್ಲಾ: ಸಾಮಾನ್ಯವಾಗಿ ಕಾಲೇಜುಗಳಲ್ಲಿ ಸೀನಿಯರ್ಸ್ ಕಿರಿಯ ವಿದ್ಯಾರ್ಥಿಗಳನ್ನ ರ್ಯಾಗಿಂಗ್ ಮಾಡುವುದನ್ನು ನೋಡಿರುತ್ತೇವೆ. ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಜ್ಯೂನಿಯರ್ಸ್ ತಮ್ಮ ಸೀನಿಯರ್ಗೆ ರ್ಯಾಗಿಂಗ್ ಮಾಡಿದಲ್ಲದೆ ಇಡೀ ರಾತ್ರಿ ಹಾಸ್ಟೆಲ್ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿರುವ 22 ವರ್ಷದ ರಜತ್ ಕುಮಾರ್ ಎಂಬಾತನಿಗೆ ಮದ್ಯಪಾನ ಮಾಡುವಂತೆ ಆತನ ಸಹಪಾಠಿಗಳು ಸೂಚಿಸಿದ್ದಾರೆ.ಆ ವೇಳೆ ನಾನು ಮದ್ಯಪಾನ ಮಾಡುವುದಿಲ್ಲ ಎಂದು ರಜತ್ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳಾದ ಚಿರಾಗ್ ರಾಣಾ, ದಿವ್ಯಾಂಶ್, ಕರಣ್ ಡೋಗ್ರಾ, ಕಾರ್ತಿಕ್ ಮತ್ತು ಸಕ್ಷಮ್ ಎಂಬಿಎ ವಿದ್ಯಾರ್ಥಿ ರಜತ್ ಕುಮಾರ್ಗೆ ಕಪಾಳಮೋಕ್ಷ ಮಾಡಿದ್ದಾರೆ.
ಮದ್ಯಪಾನ ಮಾಡುವಂತೆ ಸಹಪಾಠಿಗಳು ಸೂಚಿಸಿದಾಗ ರಜತ್ ಕುಮಾರ್ ಪ್ರಾಂಶುಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾನೆ. ಇದಕ್ಕೆ ಕೋಪಗೊಂಡ ಆರೋಪಿಗಳು ಆತನ ಕೆನ್ನೆಗೆ ಜೋರಾಗಿ ಹೊಡೆದಿದ್ದಲ್ಲದೆ ಲೆದರ್ ಬೆಲ್ಟ್ನಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ರಜತ್ಗೆ ಥಳಿಸುವುದನ್ನ ಆರೋಪಿಯೊಬ್ಬ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಒಬ್ಬ ವಿದ್ಯಾರ್ಥಿ ಹಲ್ಲೆ ನಡೆಸುವಾಗ ಉಳಿದ ಆರೋಪಿಗಳು ರಜತ್ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಐವರು ಸೇರಿಕೊಂಡು ರಜತ್ ಮೇಲೆ ಹಲ್ಲೆ ನಡೆಸುವ ಸಮಯದಲ್ಲಿ ಹಾಸ್ಟೆಲ್ ರೂಮ್ನಲ್ಲಿದ್ದ ಉಳಿದ ವಿದ್ಯಾರ್ಥಿಗಳು ಮೂಕಪ್ರೇಕ್ಷರಂತೆ ನೋಡುತ್ತಾ ನಿಂತುಕೊಂಡಿದ್ದಾರೆ.
ಹಲ್ಲೆಗೆ ಒಳಗಾದ ಎಂಬಿಎ ವಿದ್ಯಾರ್ಥಿ ರಜತ್ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆಡಳಿತ ಮಂಡಳಿ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತಾ ಮತ್ತು ಹಿಮಾಚಲ ಪ್ರದೇಶ ಶಿಕ್ಷಣ ಸಂಸ್ಥೆಗಳ (ರ್ಯಾಗಿಂಗ್ ನಿಷೇಧ) ಕಾಯ್ದೆ 2009ರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಹಿಮಾಚಲ ಪ್ರದೇಶ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.ರಜತ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು 19 ವರ್ಷ ವಯಸ್ಸಿನವರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದ್ದು, ಐವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಡಿಸಿದ್ದಾರೆ.(ಏಜೆನ್ಸೀಸ್)