ಬಿ.ಕೆ. ಹರಿಪ್ರಸಾದ್ ಮಾತನ್ನೆಲ್ಲ ಕೇಳಿಸಿಕೊಂಡು ನಮ್ಮ ನಾಯಕರು ಸುಮ್ಮನೆ ಕೂರಲ್ಲ: ಎಂ.ಬಿ ಪಾಟೀಲ್

BK Hariprasad
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಪರೋಕ್ಷ ವಾಗ್ದಾಳಿ ನಡೆಸಿರುವ ಬಿ ಕೆ ಹರಿಪ್ರಸಾದ್ ಅವರ ನಡೆ ಬಗ್ಗೆ ಪಕ್ಷವು ಗಮನಿಸುತ್ತಿದ್ದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರು. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗಿ ಕೆಲಸ ಮಾಡಿರುವವರು. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ' ಎಂದರು.

ಹರಿಪ್ರಸಾದ್ ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಎಲ್ಲರೂ ಆತ್ಮೀಯರು. ಹೀಗಿರುವಾಗ ಅವರು ಎಲ್ಲ ವಿಚಾರಗಳನ್ನೂ ಪಕ್ಷದ ಒಳಗೇ ಮಾತನಾಡಬೇಕಿತ್ತು. ಆದರೆ ಅವರು ಬೀದಿಗೆ ಹೋಗಿದ್ದಾರೆ. ಇದು ಸರಿಯಲ್ಲ. ಇದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ಯಾವುದೇ ಅಂತಃಕಲಹ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಕೆ ಹರಿಪ್ರಸಾದ್ ಹೇಳಿದ್ದೇನು?

ಪಂಚೆ ಹಾಕಿ, ಖಾಕಿ ಚಡ್ಡಿ ಹಾಕಿಕೊಂಡ ಮಾತ್ರಕ್ಕೆ ಅವರು ಸಮಾಜವಾದಿ ಆಗುವುದಿಲ್ಲ. ದೇವರಾಜು ಅರಸು ಅವರ ಕಾರಿನಲ್ಲಿ ಕೂತರೆ ಅವರು ದೇವರಾಜು ಅರಸು ಆಗುವುದಿಲ್ಲ. ಅರಸುರವರ ಚಿಂತನೆಗಳು ಇರಬೇಕು. ನಾನು ಸೋತಿರಬಹುದು. ಆದರೆ ಸತ್ತಿಲ್ಲ. ಸೈಟು ಕಳ್ಳನನ್ನ ಬಗ್ಗೆ ಮಾತನಾಡುತ್ತಾನೆ. ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನು. ನನ್ನನ್ನು ಮಂತ್ರಿ ಮಾಡದಿರುವುದಕ್ಕೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುವ ಮೂಲಕ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net