ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಗೆ ಪಾಟೀಲ ನೇತೃತ್ವದ ನಿಯೋಗ

M B PATIL DROUGHT MEETING
ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
Published on

ಬೆಂಗಳೂರು: ಸ್ವಿಟ್ಸರ್ಲೆಂಡ್‌ನ ದಾವೋಸ್‌ನಲ್ಲಿ ಜ.15ರಿಂದ 19 ರವರೆಗೆ ನಡೆಯುವ ವಿಶ್ವ ಆರ್ಥಿಕ ವೇದಿಕೆ-2024 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾನುವಾರ ಪ್ರಯಾಣ ಬೆಳೆಸಲಿದೆ.

ನಾವೀನ್ಯತೆ ಭವಿಷ್ಯ ರೂಪಿಸುತ್ತದೆ (ಇನ್ನೋವೇಷನ್ ವಿಲ್ ಇಂಪ್ಯಾಕ್ಟ್) ಎಂಬ ಧ್ಯೇಯವಾಕ್ಯದೊಂದಿಗೆ ತೆರಳುತ್ತಿರುವ ಈ ನಿಯೋಗದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಐಟಿಬಿಟಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಡಾ. ಮಹೇಶ್ ಮತ್ತಿತರರು ಇದ್ದಾರೆ.

ಈ ಶೃಂಗಸಭೆಯ ವೇಳೆ ಕರ್ನಾಟಕ ಸರ್ಕಾರದ ಉದ್ಯಮಸ್ನೇಹಿ ನೀತಿಗಳು, ಇಲ್ಲಿನ ಉತ್ತಮ ಕಾರ್ಯಪರಿಸರ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳು, ಮಾನವ ಸಂಪನ್ಮೂಲ ಲಭ್ಯತೆ, ಕೌಶಲ ಕಲಿಸಲು ನೀಡುತ್ತಿರುವ ಆದ್ಯತೆ, ಸಿಂಗಲ್ ವಿಂಡೋ ವ್ಯವಸ್ಥೆ ಸೇರಿದಂತೆ ಇಲ್ಲಿನ ಇನ್ನಿತರ ಅನುಕೂಲಗಳ ಬಗ್ಗೆ ಪ್ರಪಂಚದ ಬೇರೆ ಬೇರೆ ಭಾಗದ ಉದ್ಯಮಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯವನ್ನು ಏಷ್ಯಾದ ಪ್ರಮುಖ ತಯಾರಿಕಾ ವಲಯವನ್ನಾಗಿ ಬೆಳೆಸುವ ಗುರಿ ಸರ್ಕಾರದ್ದಾಗಿದೆ. ಇದರ ಜೊತೆಗೆ, ಸೆಮಿಕಂಡಕ್ಟರ್, ವಿದ್ಯುತ್ ವಾಹನೋದ್ಯಮ, ಬಾಹ್ಯಾಕಾಶ ರಕ್ಷಣೆ, ಸ್ವಚ್ಛ ಇಂಧನ, ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ ಮತ್ತಿತರ ಆಧುನಿಕ ತಂತ್ರಜ್ಞಾನಗಳು ಇವುಗಳಿಗೆ ನಾವು ಒತ್ತು ಕೊಟ್ಟಿದ್ದೇವೆ. ಇದನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಹೂಡಿಕೆ ಸೆಳೆಯುವುದು ಹಾಗೂ ಇದಕ್ಕೆ ಪೂರಕವಾಗಿ ಸಹಭಾಗಿತ್ವಗಳನ್ನು ಸಾಧಿಸುವುದು ನಮ್ಮ ಉದ್ದೇಶವಾಗಿದೆ ಎಂದು ನಿಯೋಗದ ಮುಖ್ಯಸ್ಥ ಎಂ.ಬಿ.ಪಾಟೀಲ ವಿವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net