

ಲಖನೌ: ತಮ್ಮ ಪತಿ ‘ದೈಹಿಕವಾಗಿ ಅಸಮರ್ಥ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಸೋದರಸೊಸೆ ಅಲೈಸ್ ಹೇಳಿದ್ದಾರೆ. ಮಗುವನ್ನು ಪಡೆಯಲು ಪತಿಯ ಅಣ್ಣನ ದೈಹಿಕ ಸಂಪರ್ಕ ಬೆಳೆಸುವಂತೆ ಅತ್ತೆ-ಮಾವ ಬಲವಂತಪಡಿಸುತ್ತಿದ್ದಾರೆ ಎಂದೂ ಹೇಳಿರುವ ಅವರು, ಪತಿ ಹಾಗೂ ಅತ್ತೆ-ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆಂದೂ ಅಲೈಸ್ ಆರೋಪಿಸಿದ್ದಾರೆ.
ಅಲೈಸ್, ಮಾಯಾವತಿಯ ಆರು ಸಹೋದರರಲ್ಲಿ ಒಬ್ಬರಾದ ನರೇಶ್ನ ಪುತ್ರಿ. 50 ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಗಾಜಿಯಾಬಾದ್ನಲ್ಲಿ ಒಂದು ಫ್ಲಾ್ಯಟ್ ನೀಡುವಂತೆ ಗಂಡನ ಮನೆಯವರು ಪೀಡಿಸುತ್ತಿದ್ದಾರೆ ಎಂದು ದೂರಿರುವ ಮಾಯಾವತಿಯ ಸೋದರಸೊಸೆ, ತನ್ನ ಪತಿ ವಿಶಾಲ್ ಸಿಂಗ್ ‘ನಪುಂಸಕ’ ಎಂದು ಹೇಳಿದ್ದಾರೆ. 2023 ನವೆಂಬರ್ 9ರಂದು ಅಲೈಸ್-ವಿಶಾಲ್ ಮದುವೆ ನಡೆದಿತ್ತು.
ಸಂತ್ರಸ್ತೆ ಅಲೈಸ್ರ ಅತ್ತೆ-ಮಾವ ಹಾಪುರ್ನ ಕೊತ್ವಾಲಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ ಹಲವು ಬಾರಿ ದೂರಿದ್ದರೂ ಯಾವುದೇ ಮೊಕದ್ದಮೆಯನ್ನು ದಾಖಲಿಸಲಾಗಿಲ್ಲ ಎಂದು ಅಲೈಸ್ ಆರೋಪಿಸಿದ್ದಾರೆ.
ಕೋರ್ಟ್ ಆದೇಶ: ನ್ಯಾಯಾಲಯವೊಂದರ ಆದೇಶದ ಮೇರೆಗೆ ಅಲೈಸ್ರ ಪತಿ ಸಹಿತ ಏಳು ಆರೋಪಿಗಳ ವಿರುದ್ಧ ಕೊನೆಗೂ ಕೇಸ್ ದಾಖಲಿಸಲಾಗಿದೆ. ಅಲೈಸ್ರ ಅತ್ತೆ ಪುಷ್ಪಾ ದೇವಿ, ಒಮ್ಮೆ ಬಿಎಸ್ಪಿ ಟಿಕೆಟ್ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.