ರಾಸುಗಳಿಗೆ ಲಸಿಕೆ ಹಾಕಿಸುವುದು ಕಡ್ಡಾಯ

Mayakonda
Published on

ಮಾಯಕೊಂಡ: ರೈತರು ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಿಸಬೇಕು ಎಂದು ಮಾಯಕೊಂಡ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಸತೀಶ್ ಕಟ್ಟಿ ಸಲಹೆ ನೀಡಿದರು.

ಸಮೀಪದ ಅಣ್ಣಾಪುರ ಗ್ರಾಮದಲ್ಲಿ ಮಂಗಳವಾರ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಚುಚ್ಚುಮದ್ದು ನೀಡಿ, ಮಾತನಾಡಿದರು.

ಎತ್ತು, ಹಸು, ಎಮ್ಮೆ, ಕರುಗಳಿಗೆ ಕಾಲುಬಾಯಿ ಮತ್ತಿತರ ಮಾರಕ ರೋಗಗಳ ತಡೆಗಾಗಿ ಲಸಿಕೆ ಹಾಕಲಾಗುತ್ತದೆ. ಎಂಟು ಒಂಬತ್ತು ತಿಂಗಳಿನ ಗರ್ಭ ಧರಿಸಿದ ಹಸು, ಎಮ್ಮೆಗಳಿಗೆ ಚುಚ್ಚುಮದ್ದು ನೀಡಲಾಗುವುದಿಲ್ಲ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 6ನೇ ಸುತ್ತಿನ ಲಸಿಕಾ ಹಾಕುತ್ತಿದ್ದು, ಮಾಯಕೊಂಡ, ಈಚಗಟ್ಟ, ಹುಚ್ಚವ್ವನಹಳ್ಳಿ, ದೊಡ್ಡರಂಗವ್ವನಹಳ್ಳಿ, ನಲ್ಕುಂದ ಪಶು ಆಸ್ಪತ್ರೆಗಳ ವ್ಯಾಪ್ತಿಯ ಎಲ್ಲ ಗ್ರಾಮಗಳ 7500 ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಈಗಾಗಲೇ ಎಲ್ಲ ಗ್ರಾಮಗಳ ರಾಸುಗಳಿಗೂ ಚುಚ್ಚುಮದ್ದು ನೀಡಲಾಗಿದೆ. ಬುಧವಾರ ಮಾಯಕೊಂಡ ಗ್ರಾಮದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಜಾನುವಾರು ಅಧಿಕಾರಿ ಎಚ್.ಕೆ. ಅಶೋಕ್, ಹಿರಿಯ ಪಶು ಪರೀಕ್ಷಾಧಿಕಾರಿಗಳಾದ ಎಸ್.ಎನ್.ಅಶೋಕ್, ಬಸವರಾಜ್, ಕೆ.ಎಂ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net