ದಿನದ ಕೆಲಸ ದೇವನಿಗೆ ಪ್ರಿಯವಾಗಿರಲಿ

basava
ಯಡೇಹಳ್ಳಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಕೆಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಿದರು. ಕಿರಣ್ ದೇಸಾಯಿ, ಕಿರಣ್‌ಕುಮಾರ್, ಚಂದ್ರಕಲಾ, ನವೀನ್ ನಾಗಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಆಚರಣೆಗಳು ಅದ್ದೂರಿಗಿಂತ ಅರ್ಥಪೂರ್ಣವಾಗಿ ಇರಬೇಕು. ಆಚರಣೆಗಳ ಪೂರ್ವ ತಯಾರಿಗಳು ದೊಡ್ಡ ಪರಿಣಾಮ ಬೀರುತ್ತವೆ. ಅರ್ಥಪೂರ್ಣ ಆಚರಣೆಗಳು ಮನಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ಶಿವಮೊಗ್ಗ ಬಸವ ಕೆಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಸಮೀಪದ ಯಡೇಹಳ್ಳಿ ಕರಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಬಸವ ಜಯಂತಿ ಆಚರಣೆ ಸಮಿತಿ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಕಾರ್ಯಗಳಲ್ಲಿ ಯುವಕರು ಮುನ್ನೆಲೆಯಲ್ಲಿರುವುದು ಆಶಾದಾಯಕ ಬೆಳವಣಿಗೆ. ಇಂತಹ ಕಾರ್ಯಗಳಲ್ಲಿ ಯುವಶಕ್ತಿಗೆ ಪೂರಕವಾಗಿ ಹಿರಿಯರು ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಉತ್ಸಾಹ, ಹುಮ್ಮಸಿನ ಮುಂದೆ ಅವ್ಯವಸ್ಥೆಗಳು ಸಹ ಮರೆತುಹೋಗುತ್ತವೆ ಎಂದರು.

ಬಸವೇಶ್ವರ ತಪಸ್ವಿಯಲ್ಲ ಗೃಹಸ್ಥ. ಗೃಹಸ್ಥನೂ ಮಹಾಯೋಗಿ, ವಿಶ್ವಗುರು ಆಗಬಹುದು ಎನ್ನುವುದಕ್ಕೆ ಬಸವಣ್ಣ ಉದಾಹರಣೆ. ಇದಕ್ಕಾಗಿ ಅಂತರಂಗ, ಬಹಿರಂಗದಲ್ಲಿ ವ್ಯತ್ಯಾಸಗಳಿರಬಾರದು. ಪುರುಷ ಮತ್ತು ಮಹಿಳೆ ಸಮಾನವಾಗಿ ಇಷ್ಟಲಿಂಗ ಧರಿಸುತ್ತಿರುವುದು ಲಿಂಗಾಯತ ಧರ್ಮದಲ್ಲಿ ಮಾತ್ರ. ಧರ್ಮ, ಆಚಾರ, ವಿಚಾರಗಳು ಸಮಾನವಾಗಿರಬೇಕು. ಮಾಡುವ ಕಾಯಕಗಳು ದೇವರಿಗೆ ಪ್ರಿಯವಾಗಬೇಕು. ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕಿ ಕಿರಣ್ ದೇಸಾಯಿ ಮಾತನಾಡಿ, ಆಚರಣೆಗಳಲ್ಲಿ ಉತ್ಸಾಹ, ಪ್ರೇರಣಾ ಶಕ್ತಿ ಕಡಿಮೆ ಆಗಬಾರದು. ಸಮಾಜದಲ್ಲಿ ಅರಿವಿನ ಬೆಳಕು ಮೂಡಬೇಕಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಮಾಜವೂ ಪಾಲ್ಗೊಂಡಾಗ ಆಚರಣೆಗಳು ಅರ್ಥಪೂರ್ಣವಾಗುತ್ತವೆ. ವ್ಯಕ್ತಿಯೊಬ್ಬ ಶಕ್ತಿಯಾಗಿ ಪರಿವರ್ತನೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಗ್ರಾಮದ ಮುಖಂಡ ಕೆ.ಪಿ.ಕಿರಣ್‌ಕುಮಾರ್ ಮಾತನಾಡಿ, ಬಸವೇಶ್ವರರು ಒಂದು ಧರ್ಮಕ್ಕೆ ಸೀಮಿತವಲ್ಲ. ಬಸವಾದಿ ಶಿವಶರಣರ ತತ್ವಗಳನ್ನು ಜೀವನದಲ್ಲಿ ಅಡವಡಿಸಿಕೊಳ್ಳಬೇಕು. ಕಾಯಕ ತತ್ವ ಗ್ರಾಮೀಣ ಜನರಲ್ಲಿ ಮರೆಯಾಗುತ್ತಿದೆ. ಸಂಸ್ಕಾರವಿಲ್ಲದ ಶಿಕ್ಷಣ ಪದ್ಧತಿಯಿಂದಾಗಿ ಸಮಾಜಕ್ಕೆ ವಿದ್ಯಾವಂತರೇ ಅಪಾಯಕಾರಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ನಿವೃತ್ತ ಯೋಧ ನವೀನ್ ನಾಗಪ್ಪ, ಮಾಜಿ ಚೇರ್ಮನ್ ನಂದ್ಯಪ್ಪ, ಎಚ್.ಬಸಪ್ಪ, ಎಂ.ಪಾಲಾಕ್ಷಪ್ಪ, ಶಿವಲಿಂಗಪ್ಪ, ಅನ್ನಪೂರ್ಣಾ, ಎಚ್.ಜಿ ಮಲ್ಲಯ್ಯ, ಮಹಾರುದ್ರ, ಸಂಜನಾ, ಶಂಕರಮೂರ್ತಿ, ಸಿಂಚನಾ, ರೋಜಾ ಮನು ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net