

ಗೋಣಿಕೊಪ್ಪಲು: ಸವಿತಾ ಸಮಾಜದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು. ಕೊಡಗಿನ ಆಚಾರ ವಿಚಾರ, ಪದ್ಧತಿ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ಸಮಾಜದವರ ಮೇಲಿದೆ. ಆ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬಗಳನ್ನು ಯಶಸ್ವಿಯಾಗಿ ಆಚರಿಸುವಂತಾಗಬೇಕು ಎಂದು ಕೊಡವ ಭಾಷಿಕ ಸಮುದಾಯ ಕೂಟ ಕೊಡಗು ಜಿಲ್ಲೆಯ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಕರೆ ನೀಡಿದರು.
ಗೋಣಿಕೊಪ್ಪ ಸಮೀಪದ ಕೈಕೇರಿ ಸವಿತಾ ಸಮಾಜದ ಸಭಾಂಗಣದಲ್ಲಿ ಕೊಡಗ್ ಕೊಡವ ಸವಿತಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡನೇ ವರ್ಷದ ಕೈಲ್ ಪೊಳ್ದ್ ನಮ್ಮೆರ ಒತ್ತೋರ್ಮೆ ಕೂಟದಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಮೂಲ ನಿವಾಸಿಗಳು ತಮ್ಮ ಪದ್ಧತಿ ಪರಂಪರೆಯನ್ನು ಉಳಿಸುವತ್ತ ಹೆಚ್ಚಿನ ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಸವಿತಾ ಸಮಾಜವು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯಗಳನ್ನು ಪಾಲಿಸುವ ಕೆಲಸ ನಿರ್ವಹಿಸುತ್ತಿದೆ. ಸಮಾಜದವರು ವಾರ್ಷಿಕವಾಗಿ ಒಂದೆಡೆ ಸೇರುವ ಪ್ರಯತ್ನ ನಡೆದಿರುವುದು ಶ್ಲಾಘನೀಯ ಎಂದರು.
ಕಾಫಿ ಬೆಳೆಗಾರ, ಕೊಡವ ಭಾಷಿಕ ಸಮುದಾಯದ ಸದಸ್ಯ ವೇದಪಂಡ ಕಿರಣ್ ಮಾತನಾಡಿ, ಸವಿತ ಸಮಾಜವು ಸಣ್ಣ ಜನಸಂಖ್ಯೆಯನ್ನು ಹೊಂದಿದೆ. ಭಾಷಿಕ ಸಮುದಾಯಗಳು ಒಟ್ಟಾಗಿ ಸೇರುವ ಮೂಲಕ ನಮ್ಮ ಪದ್ಧತಿ, ಪರಂಪರೆಯನ್ನು ಉಳಿಸುವ ಮೂಲಕ ಯುವ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಇದರಿಂದ ನಮ್ಮ ಪದ್ಧತಿ, ಪರಂಪರೆ ಉಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ತಾಪನೇರ ಸಾಬು ಮಾತನಾಡಿ, ಚದುರಿ ಹೋಗಿರುವ ಸವಿತಾ ಸಮಾಜದಸವರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದೀಗ ಆರಂಭಗೊಂಡಿದೆ. ಕಳೆದ 2 ವರ್ಷದಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಒಂದೆಡೆ ಸೇರುವ ಪ್ರಯತ್ನ ಯಶಸ್ವಿಯಾಗುತ್ತಿದೆ. ಹೊರ ಜಿಲ್ಲೆಯಲ್ಲಿರುವ ಸಮಾಜ ಬಾಂಧವರು ಕೈಲ್‌ಪೊಳ್ದ್ ನಮ್ಮೆಯ ಅಂಗವಾಗಿ ಒಂದೆಡೆ ಸೇರುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯ ವೃದ್ದಿಸಲು ಅವಕಾಶವಾಗುತ್ತಿದೆ. ಮೊದಲ ಪ್ರಯತ್ನವಾಗಿ ಸಮುದಾಯದಲ್ಲಿರುವ ನಿವೃತ್ತ ಯೋಧರನ್ನು ಗುರುತಿಸುವ ಮೂಲಕ ಗೌರವಿಸಲಾಗುತ್ತಿದೆ. ಸಂಸ್ಕೃತಿ,ಆಚಾರ ವಿಚಾರಗಳಿಗೂ ಒತ್ತು ನೀಡಲಾಗುತ್ತಿದೆ ಎಂದರು.
ಕೊಡವ ಭಾಷಿಕ ಸವಿತಾ ಸಮಾಜದ ಕಾರ್ಯದರ್ಶಿ ಹಲಚ್ಚಿರ ದೇವಯ್ಯ, ನಿರ್ದೇಶಕರಾದ ಹೊನ್ನೆಪಂಡ ಮನು, ಪೂಣಚ್ಚೀರ ಮನೋಜ್, ವೇದಪಂಡ ಆರ್.ಬಿದ್ದಪ್ಪ, ತಾಪನೇರ ಮಹೇಶ್, ವೇದಪಂಡ ವಿಷ್ಮ, ಹಲಚ್ಚೀರ ಎಂ.ತಮ್ಮುಣಿ ಉಪಸ್ಥಿತರಿದ್ದರು. ಪೂಣಚ್ಚೀರ ಸುಮನ್ ಮನೋಜ್ ನಿರೂಪಿಸಿ, ಪ್ರಜ್ಞಾ, ತೃಷ್ಯಾ,ದಿಶಾ ಪ್ರಾರ್ಥಿಸಿ, ತಾಪನೇರ ಸುಷ್ಮಿ ಸ್ವಾಗತಿಸಿ, ಹಲಚ್ಚೀರ ರೋನಿಷ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ಸಂಜೆಯವರೆಗೂ ವಿವಿಧ ಪೈಪೋಟಿಗಳು ನಡೆದವು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಹಾಗೂ ಪುರುಷರು ಸವಿತಾ ಸಮಾಜದಿಂದ ಮೆರವಣಿಗೆಯ ಮೂಲಕ ತೆರಳಿ ಸಮೀಪದ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಕೆಯ ನಂತರ ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.