

ಗೋಣಿಕೊಪ್ಪಲು: ಕೊಡವ ಪದ್ಧತಿ, ಪರಂಪರೆ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ ಎಂದು ತಿಳಿಸಿದರು.
ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಗೂ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತೆ ಕೈಬುಲೀರ ಪಾರ್ವತಿ ಬೋಪಯ್ಯ ಅವರಿಗೆ ಪೊನ್ನಂಪೇಟೆ ಇಗುತ್ತಪ್ಪ ಸೌಹಾರ್ದ ಸಂಘದ ಸಭಾಂಗಣದಲ್ಲಿ ಗುರುವಾರ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‌ನಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಡವ ಸಮುದಾಯದಲ್ಲಿ ಗುರುಪರಂಪರೆ ಇಲ್ಲದಿರುವುದರಿಂದ ನಾವು ಮಾಡಿದ್ದೇ ಸಂಸ್ಕೃತಿ, ಸಂಪ್ರದಾಯ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮನೆಗಳಲ್ಲಿ ಕೊಡವ ಪದ್ಧತಿ, ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಹಬ್ಬ-ಹರಿದಿನಗಳ ಆಚರಣೆಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಮೂಲಕ ಕೊಡವ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೊಡವ ಸಮುದಾಯಕ್ಕೆ ಸೇರಿದವರು ಉದ್ಯೋಗ ಇನ್ನಿತರ ಕಾರಣಗಳಿಂದಾಗಿ ಜಿಲ್ಲೆಯಿಂದ ಹೊರಗೆ ನೆಲೆಸಿದ್ದು, ಅಂತಹವರು ಅಲ್ಲಿಯೇ ನೆಲೆ ಕಂಡುಕೊಳ್ಳುವುದರಿಂದ ಮುಂದಿನ ಮೂವತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಕೊಡವ ಸಮುದಾಯದವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೈಶಿಷ್ಟ್ಯಪೂರ್ಣ ಕೊಡವ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮುದಾಯದ ಪ್ರತಿಯೊಬ್ಬರ ಮೇಲಿದ್ದು, ಈ ನಿಟ್ಟಿನಲ್ಲಿ ಎಲ್ಲ ಕೊಡವ ಸಮಾಜಗಳಲ್ಲೂ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರು.
ಸನ್ಮಾನ ಸ್ವೀಕರಿಸಿದ ಮತ್ತೊಬ್ಬ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತೆ ಕೈಬುಲೀರ ಪಾರ್ವತಿ ಬೋಪಯ್ಯ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಂದೆ-ತಾಯಿಯೇ ಮೊದಲ ಗುರುಗಳು, ದೇವರೊಬ್ಬನೇ ನಾಮ ಹಲವು ಎಂದರಲ್ಲದೆ, ಕೊಡವ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಗಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಇತರ ಭಾಷೆಗಳನ್ನು ಮಾತನಾಡುವ ಜತೆ ಮನೆಯಲ್ಲಿ ಮಾತೃಭಾಷೆ ಕೊಡವ ಭಾಷೆಯನ್ನು ಮಾತನಾಡುವಂತೆ ಕರೆ ನೀಡಿದರು.
ಸಂಘದ ಸದಸ್ಯರಿಗೆ ಅರಿಜಿತ್ ತಕ್ಕ್ ಪರಿಯೋ ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಆರು ಸದಸ್ಯರು ಭಾಗವಹಿಸಿದ್ದು, ಐನಂಡ ಪುಷ್ಪಾ ಪ್ರಥಮ ಹಾಗೂ ಮುಕ್ಕಾಟೀರ ಕಮಲಾ ದ್ವಿತೀಯ ಬಹುಮಾನ ಪಡೆದುಕೊಂಡರು. ಐನಂಡ ಪುಷ್ಪಾ ತಮ್ಮಯ್ಯ ಅವರು ‘ಈಗಿನ ಸಮಾಜದ ಪರಿಸ್ಥಿತಿ, ಬದಲಾಗುತ್ತಿರುವ ನಮ್ಮ ಮಕ್ಕಳ ಜೀವನದ ಶೈಲಿ, ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬಿಟ್ಟು ಪರಸಂಸ್ಕೃತಿಯ ಹಿಂದೆ ಹೋಗುವುದಾ?’ ಎಂಬ ಪ್ರಬಂಧ ಮಂಡಿಸಿದರು.
ಸಂಘದ ಎಲ್ಲ ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷೆ ಮಳವಂಡ ಪೂವಿ ಮುತ್ತಪ್ಪ, ನಿರ್ದೇಶಕಿ ಕೆಚ್ಚೆಟ್ಟೀರ ಕಾಮುಣಿ, ಖಜಾಂಚಿ ಮೂವೇರ ಧರಣಿ ಗಣಪತಿ, ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ, ಪ್ರಮುಖರಾದ ಅಜ್ಜಿಕುಟ್ಟೀರ ಶಾಂತಿ ಮೊಣ್ಣಪ್ಪ, ತೀತಿರ ಉರ್ಮಿಳಾ ಸೋಮಯ್ಯ, ಮನ್ನೆರಸರು ರಮೇಶ್, ಮಂಡೆಪಂಡ ತ್ಯಾಗಿ ರವಿ, ವಾಂಚೀರ ಜಾನ್ಸಿ, ಮಚ್ಚಾರಂಡ ನಳಿನಿ, ಕೆಚ್ಚೆಟ್ಟೀರ ರಶ್ಮಿ, ಬಲ್ಲಚಂಡ ಆರತಿ ಚಂಗಪ್ಪ, ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.