

ಸೊರಬ: ಪ್ರತಿಯೊಬ್ಬರೂ ವಿಚಾರಗಳ ಬಗ್ಗೆ ಮಂಥನ ಮಾಡಿಕೊಳ್ಳಬೇಕು. ಏಕಾಂತದಲ್ಲಿ ಕುಳಿತು ಧ್ಯಾನ ಮಾಡಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ.ಚೇತನಕ್ಕ ತಿಳಿಸಿದರು.
ಪಟ್ಟಣದಲ್ಲಿರುವ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ದೀಪಾವಳಿ ಹಬ್ಬದ ಆರಂಭದ ಸಂಕೇತವಾಗಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಿಮ ಕಾಲಘಟ್ಟದಲ್ಲಿ ನಮ್ಮ ಆತ್ಮಿಕ ಶಕ್ತಿ ಮಾತ್ರ ನಮ್ಮ ಜತೆ ಇರುತ್ತದೆಯೇ ಹೊರತು ಇನ್ಯಾರೂ ಇರುವುದಿಲ್ಲ ಎಂದರು.
ಶಾಂತಿ, ವಿಶ್ವ ಕಲ್ಯಾಣದ ಕಡೆ ನಮ್ಮ ಚಿತ್ತ ಹರಿಸಬೇಕಿದೆ. ಮೂಲ ಸಂಸ್ಕಾರದಿಂದ ಮಾತ್ರ ಎಲ್ಲವನ್ನೂ ಪರಿವರ್ತನೆ ಮಾಡಿಕೊಳ್ಳುತ್ತ ಹೋಗಬೇಕು. ಜಗತ್ತಿನಲ್ಲಿ ಸಮಸ್ಯೆಗಳು ಇಲ್ಲದೇ ಇರುವವರು ಯಾರೂ ಇಲ್ಲ. ಅದರ ಅನುಭವನ್ನು ಮಾಡಿಕೊಳ್ಳದೆ ಸತ್ಕಾರ್ಯಗಳನ್ನು ಮಾಡುತ್ತ ಸಾಗಬೇಕು ಎಂದು ತಿಳಿಸಿದರು.
ನಮ್ಮ ಮನಸ್ಸು ಹೇಗೆ ಯೋಚಿಸುತ್ತದೆಯೋ ಹಾಗೇ ನಾವು ತಯಾರಾಗುತ್ತೇವೆ. ಯಾವಾಗಲೂ ಧನಾತ್ಮಕ ಚಿಂತನೆಗಳನ್ನು ಮಾಡುತ್ತಲೇ ಇರಬೇಕು. ನಮ್ಮ ಜತೆ ಸದಾ ಭಗವಂತನಿದ್ದಾನೆ ಎಂದುಕೊಂಡು ನಡೆಯಬೇಕು ಎಂಬುದು ನಮ್ಮ ಜ್ಞಾನಕ್ಕೆ ಬಂದಿದೆ. ನಮ್ಮಲ್ಲಿರುವ ಧೈರ್ಯವನ್ನು ಎಂತಹ ಸಂದರ್ಭದಲ್ಲೂ ಕಳೆದುಕೊಳ್ಳದಿದ್ದರೆ ಕಷ್ಟಗಳನ್ನು ನಿಭಾಯಿಸಬಹುದು ಎಂಬುದನ್ನು ಕಂಡುಕೊಂಡಿದ್ದೇವೆ ಎಂದು ಮೌಂಟ್ ಅಬು ದರ್ಶನ ಮಾಡಿಕೊಂಡು ಬಂದವರು ಅನಿಸಿಕೆ ಹಂಚಿಕೊಂಡರು.
ಸರಸ್ವತಿ ನಾವುಡ, ಸುಭಾಷ್‌ಚಂದ್ರ, ಶೈಲಜಾ ಶಿವಯೋಗಿ, ಶಾರದಕ್ಕ, ಪುನರ್ವ, ಗಜಾನನ ಇತರರಿದ್ದರು.