ಪ್ರತಿಯೊಬ್ಬರಿಗೂ ‘ಯೋಗದಿಂದ ಆರೋಗ್ಯ’ ಮನವರಿಕೆಯಾಗಲಿ

5
Published on

ಭಾರತದಲ್ಲಿ ಹುಟ್ಟಿದ ಯೋಗ ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಯೋಗದಿಂದ ಆರೋಗ್ಯ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಕೆ. ಹರೀಶ್‌ಗೌಡ ಸಲಹೆ ನೀಡಿದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾದ ಯೋಗವನ್ನು ಜನಸಾಮಾನ್ಯರಿಗೂ ತಲುಪಿಸಬೇಕು. ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಗರಕ್ಕೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಆ ಕಾಲದಲ್ಲಿಯೇ ಕಲ್ಪಿಸಿದ್ದಾರೆ. ಆಯುರ್ವೇದ ಹಾಗೂ ಯೋಗ ಕೂಡ ಅವುಗಳಲ್ಲಿ ಒಂದು. ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಹಾಗೂ ಯೋಗದ ಜತೆಗೆ ಸಂಸ್ಕಾರವನ್ನು ಕಲಿಸುತ್ತಿರುವುದು ಸ್ವಾಗತಾರ್ಹ ಎಂದರು.

ನಮ್ಮಂಥ ಒತ್ತಡದಲ್ಲಿ ಇರುವವರಿಗೆ ಯೋಗ ಕಲಿಯಲು ನೀವು ಪ್ರೇರೇಪಿಸಬೇಕು. ಯೋಗದಿಂದ ಶೇ.90 ರಷ್ಟು ಆರೋಗ್ಯದ ಯಾವುದೇ ಸಮಸ್ಯೆ ಇಲ್ಲದಂತೆ ಜೀವಿಸಬಹುದು. ಇಂಗ್ಲಿಷ್ ಔಷಧಿಯಂತೆ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ ಎಂದರು.

ಯೋಗಗುರು ಬಿ.ಪಿ.ಮೂರ್ತಿ ಮಾತನಾಡಿ, ಮಾನಸಿಕ, ದೈಹಿಕ, ಆಧ್ಯಾತ್ಮಿಕ, ಸಾಮಾಜಿಕ ಆರೋಗ್ಯದ ಜತೆಗೆ ನೈತಿಕ ಆರೋಗ್ಯವೂ ಮುಖ್ಯ. ನೈತಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ ಎಂದರು.

ಮೈಸೂರಿಗೆ ಯೋಗನಗರಿ ಎಂಬ ಹೆಗ್ಗಳಿಕೆ ಇದೆ. ಇದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಮ್ಮ ಹಿರಿಯ ಯೋಗಗುರುಗಳು ಕಾರಣ. ಪ್ರಸ್ತುತ ಆರೋಗ್ಯವೇ ಭಾಗ್ಯವಾಗಿರುವುದರಿಂದ ಎಲ್ಲರಿಗೂ ಯೋಗದ ಮಹತ್ವ ತಿಳಿಸಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸರ್ಕಾರಿ ಆಯುರ್ವೇದ ಕಾಲೇಜು ಆಯುರ್ವೇದ ಹಾಗೂ ಯೋಗ ಪರಂಪರೆಯನ್ನು ಮುಂದುವರೆಸುತ್ತಿದೆ. ಹಲವಾರು ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳಿಗೆ ಹೋಗಿ ಯೋಗದ ಪ್ರಾಮುಖ್ಯತೆ ಬಗ್ಗೆ ಪ್ರಚಾರ ಮಾಡುತ್ತಿದೆ. ಆಸ್ಪತ್ರೆಗೆ ಸಾಕಷ್ಟು ಹೊರರೋಗಿಗಳು ಕೂಡ ಬಂದು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹತ್ತು ದಿನಗಳ ಕಾರ್ಯಕ್ರಮಗಳನ್ನು ರೂಪಿಸಿ, ಜನಸಾಮಾನ್ಯರಿಗೆ ಯೋಗವನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಒತ್ತಡ ನಿವಾರಣೆಗೆ ಯೋಗ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡಬೇಕು ಎಂದು ಹೇಳಿದರು.

ಸ್ವಸ್ಥವೃತ್ತ ಮತ್ತು ಯೋಗ ವಿಭಾಗದದ ಪ್ರಾಧ್ಯಾಪಕ ಡಾ.ಸುಧೀಂದ್ರ ಜಿ.ನವಲೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹಾಯಕ ಪ್ರಾಧ್ಯಾಪಕ -ಡಾ.ಪ್ರವೀಣ್ ಕುಮಾರ್ ಇದ್ದರು. ಇದೇ ವೇಳೆ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net