

ನಂಜನಗೂಡು: ನಗರದ ಈದ್ಗಾ ಮೊಹಲ್ಲಾದಲ್ಲಿರುವ ಮೈದಾನದಲ್ಲಿ ಮುಸ್ಲಿಮರು ಬಕ್ರೀದ್ ಹಿನ್ನೆಲೆ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದ ಚಾಮಲಾಪುರದ ಬೀದಿಯಲ್ಲಿರುವ ಜಾಮೀಯಾ ಮಸೀದಿಯಿಂದ ಈದ್ಗಾ ಮಸೀದಿಯವರೆಗೆ ಒಟ್ಟಾಗಿ ಬಂದ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಧರ್ಮ ಗುರು ಮುಸಬೀರ್ ಅಹಮದ್ ಮಾತನಾಡಿ, ಸಮಾನತೆ, ತ್ಯಾಗ, ಭಕ್ತಿ, ಸ್ನೇಹ, ಬಾಂಧವ್ಯ ಹಾಗೂ ಐಕ್ಯತೆಯ ಸಂಕೇತವಾಗಿ ಬಕ್ರೀದ್ ಆಚರಿಸಲಾಗುತ್ತಿದ್ದು, ಎಲ್ಲರೂ ಕೂಡಿ ಬಾಳುವಂತಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ಕೆ.ಮಹಮದ್‌ಅಕ್ಬರ್ ಆಲೀಂ, ಮುಖಂಡ ಎಂ.ಅಬ್ದುಲ್ ಖಾದರ್, ಮುಜೀಫ್, ಮುನಾವರ್, ಸಿಟಿಜನ್ ಶಾಲೆ ಅಧ್ಯಕ್ಷ ಮಹಮದ್ ಅಲಿ, ಸೈಯದ್ ಇತರರು ಇದ್ದರು.