

Max Trending: ಕನ್ನಡ ಚಿತ್ರರಂಗದ ಬಾದ್ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಮ್ಯಾಕ್ಸ್’ (Max) ಇದೇ ಡಿಸೆಂಬರ್ 25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿ, ಸದ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಪುಡಿ ಮಾಡುವತ್ತ ದಾಪುಗಾಲಿಟ್ಟಿದೆ.
ಕಳೆದ ಎರಡೂವರೆ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಳ್ಳದ ಸುದೀಪ್ರನ್ನು ಈಗ ಮ್ಯಾಕ್ಸಿಮಮ್ ಮಾಸ್ನಿಂದಲೇ ಕೂಡಿರುವ 'ಮ್ಯಾಕ್ಸ್' ಚಿತ್ರದ ಮೂಲಕ ಪರದೆಯಲ್ಲಿ ನೋಡುತ್ತಿರುವ ಸಿನಿರಸಿಕರು, ನಟನ ಆ್ಯಕ್ಷನ್, ಮಾಸ್ ಲುಕ್ಗಳಿಗೆ ಫಿದಾ ಆಗಿದ್ದಾರೆ. ಹೀರೋಯಿನ್ ಇಲ್ಲದ ಈ ಚಿತ್ರದಲ್ಲಿ ಸುದೀಪ್ ಅವರ ಅಬ್ಬರ ಪ್ರೇಕ್ಷಕ ವರ್ಗಕ್ಕೆ ಚಿತ್ರದ ಪೂರ ಭರಪೂರ ಮನರಂಜನೆ ನೀಡಿದೆ. ರಿಲೀಸ್ ಆದ ದಿನದಿಂದಲೂ ಇಂದಿನವರೆಗೂ ಟ್ವಿಟರ್ನಲ್ಲಿ (ಪ್ರಸ್ತುತ ಎಕ್ಸ್) ಟ್ರೆಂಡಿಂಗ್ ಪಟ್ಟಿಯಲ್ಲಿ ಮ್ಯಾಕ್ಸ್ ಸ್ಥಾನ ಗಿಟ್ಟಿಸಿಕೊಂಡಿರುವುದು ಮತ್ತೊಂದು ವಿಶೇಷ.
ಐದನೇ ದಿನಕ್ಕೆ ಕಾಲಿಟ್ಟಿರುವ ಸುದೀಪ್ ಮ್ಯಾಕ್ಸ್, 27.50* ಕೋಟಿ ರೂ. ಗಳಿಕೆ ಕಂಡಿದೆ. ದಿನದ ಅಂತ್ಯದೊಳಗೆ 30 ಕೋಟಿ ತಲುಪಲಿದ್ದು, ಹೊಸ ವರ್ಷದ ದಿನಗಳಲ್ಲಿ ಶೀಘ್ರವೇ 50 ಕೋಟಿ ರೂ. ತಲುಪುವ ಸಾಧ್ಯತೆ ಹಾಗೂ ಭರವಸೆಗಳು ಹೆಚ್ಚಿವೆ. ಪ್ರಸ್ತುತ ಪ್ರೇಕ್ಷಕರಿಂದ ಹೌಸ್ಫುಲ್ ಆಗ್ತಿರುವ ಚಿತ್ರಮಂದಿರಗಳತ್ತ ಮುಖ ಮಾಡಿರುವ ಸುದೀಪ್, ಚಿತ್ರದ ಭರ್ಜರಿ ಗೆಲುವಿನಿಂದ ಭಾರೀ ಸಂತಸಗೊಂಡಿದ್ದಾರೆ. ಇದೇ ಖುಷಿಯಲ್ಲಿ ನಿನ್ನೆ (ಡಿ.29) ಬೆಂಗಳೂರಿನ ಜಿಟಿ ಮಾಲ್ ಸಕ್ಸಸ್ ಭೇಟಿಯಲ್ಲಿ ಪಾಲ್ಗೊಂಡ ಕಿಚ್ಚ, ತನಗಾಗಿ ಆಗಮಿಸಿದ್ದ ಪ್ರೇಕ್ಷಕ ವರ್ಗ ಹಾಗೂ ಫ್ಯಾನ್ಸ್ಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು.
ಇನ್ನು ನಾಳೆ (ಡಿ.31) ನರ್ತಕಿ ಚಿತ್ರಮಂದಿರಕ್ಕೆ ಭೇಟಿ ಕೊಡಲಿರುವ ಸುದೀಪ್, ಅಭಿಮಾನಿಗಳೊಂದಿಗೆ ಮ್ಯಾಕ್ಸ್ ಚಿತ್ರ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಈಗ ಅಧಿಕೃತವಾಗಿ ಹೊರಬಿದ್ದಿದೆ. 2024ರ ಕೊನೆಯಲ್ಲಿ ತೆರೆಕಂಡ ಮ್ಯಾಕ್ಸ್ಗೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ದೊರಕಿದ್ದು, ಚಿತ್ರವನ್ನು ಯಶಸ್ಸಿನತ್ತ ಕೊಂಡೊಯ್ಯವ ಭರವಸೆಯನ್ನು ಪರೋಕ್ಷವಾಗಿ ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚುವರಿ ಬುಕ್ಕಿಂಗ್ಗಳು ನಡೆಯುತ್ತಿದ್ದು, ಸಿನಿಮಾ ಪರದೆಗಳು ಚಿತ್ರರಸಿಕರಿಂದಲೇ ತುಂಬಿ ತುಳುಕುತ್ತಿರುವುದು ಖುಷಿಯ ಸಂಗತಿ.
ತೆಲುಗು ಸಿನಿಮಾ 'ಪುಷ್ಪ 2' ಸೃಷ್ಟಿಸಿದ ಟ್ರೆಂಡ್ ಮತ್ತು ಅಬ್ಬರವನ್ನು ಹಿಂದಿಕ್ಕಿರುವ ಸುದೀಪ್ ಅಭಿನಯದ ಕನ್ನಡ ಸಿನಿಮಾ 'ಮ್ಯಾಕ್ಸ್', ಸಿನಿಪ್ರೇಕ್ಷಕರಲ್ಲಿ ಹಾಗೂ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಚಿತ್ರಗಳು ಇತರೆ ಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ಮುಂಚೂಣಿಗೆ ಬರುತ್ತಿರುವುದು ಹಾಗೂ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುತ್ತಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.