

ಬೆಂಗಳೂರು: ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಮರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಆಧುನಿಕ ಶಿಕ್ಷಣ ಉತ್ತೇಜಿಸಲು ಸರ್ಕಾರ ಮೌಲಾನ ಆಜಾದ್ ಟ್ರಸ್ಟ್ ರಚನೆಗೆ ಮುಂದಾಗಿದೆ. ಆಧುನಿಕ ಶಿಕ್ಷಣ ಪದ್ಧತಿ ಅಳವಡಿಸಿದರೆ ಮುಂದಿನ ಜೀವನೋಪಾಯಕ್ಕೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ರಾಜಕೀಯ ಉದ್ದೇಶ: ಟ್ರಸ್ಟ್ ರಚನೆಯ ಹಿಂದೆ ರಾಜಕೀಯ ಉದ್ದೇಶವೂ ಇದ್ದು, ಬಿಜೆಪಿಯಿಂದ ದೂರವಿರುವ ಮುಸ್ಲಿಂ ಸಮುದಾಯವನ್ನು ಸೆಳೆಯುವ ಯೋಜನೆಯದು ಎನ್ನಲಾಗಿದೆ.
ಏನಿದು ಟ್ರಸ್ಟ್?: ಮುಸ್ಲಿಮರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವ್ಯಾಪಕ ಕೆಲಸ ಮಾಡಬೇಕಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಮಾಡಬೇಕಾಗಿರುವ ಕಾರಣ ಮೌಲಾನ ಆಜಾದ್ ಹೆಸರಿನಲ್ಲಿ ಟ್ರಸ್ಟ್ ರಚನೆ ಮಾಡಲಾಗುತ್ತಿದೆ. ಟ್ರಸ್ಟ್ ಚಟುವಟಿಕೆಗಳನ್ನು ನಡೆಸಲು 25 ಕೋಟಿ ರೂ. ಮೀಸಲಿಡಲಾಗುತ್ತದೆ. ಟ್ರಸ್ಟ್ಗೆ ಮುಸ್ಲಿಂ ಸಮುದಾಯದ ಮುಖಂಡರನ್ನೇ ನೇಮಕ ಮಾಡಲಾಗುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ವಿಶೇಷ ಆಸಕ್ತಿ ವಹಿಸಿ ಟ್ರಸ್ಟ್ ಸ್ಥಾಪನೆಗೆ ಮುಂದಾಗಿದ್ದಾರೆ.
ಟ್ರಸ್ಟ್ ಕೆಲಸಗಳೇನು?: ಸರ್ಕಾರ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ವಸತಿ ಶಾಲೆಗಳನ್ನು ತೆರೆದಿದೆ. ಜತೆಗೆ ರಾಜ್ಯದಲ್ಲಿ 960 ಮದ್ರಸಾಗಳಿವೆ. ಮದ್ರಸಾಗಳಲ್ಲಿ ಹೆಚ್ಚಾಗಿ ಧಾರ್ವಿುಕ ಶಿಕ್ಷಣ ನೀಡಲಾಗುತ್ತದೆ. ಅದೊಂದರಿಂದಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ಧಾರ್ವಿುಕ ಶಿಕ್ಷಣದ ಜತೆಜತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಶಿಕ್ಷಣ ನೀಡಿದರೆ ಮುಂದೆ ಜೀವನಕ್ಕೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಉದ್ದೇಶವೆಂದು ಅಲ್ಪಸಂಖ್ಯಾತ ಇಲಾಖೆಯ ಉನ್ನತ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.
ಇತ್ತೀಚೆಗೆ ನಡೆದಿರುವ ಅಧ್ಯಯನವೊಂದರ ಪ್ರಕಾರ, ಸಾಕಷ್ಟು ಮದ್ರಸಾಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಆ ಕೊರತೆಗಳನ್ನು ನೀಗುವುದಕ್ಕೆ ನೆರವಾಗುವ ಉದ್ದೇಶವೂ ಟ್ರಸ್ಟ್ ಸ್ಥಾಪನೆಯ ಹಿಂದಿದೆ ಎಂದು ಮೂಲಗಳು ಹೇಳುತ್ತವೆ.